ಸಿನಿಮಾ ಚಿತ್ರೀಕರಣ: ಅನುಮತಿ ಕೊಟ್ಟವರನ್ನು ಅಮಾನತು ಮಾಡಿ

| Published : Apr 12 2025, 12:45 AM IST

ಸಾರಾಂಶ

ಯಾವುದೇ ಕಾರಣಕ್ಕೂ ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಬೇಡ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಚಿತ್ರೀಕರಣಕ್ಕೆ ಅನುಮತಿ ಕೊಟ್ಟವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಯಾವುದೇ ಕಾರಣಕ್ಕೂ ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಬೇಡ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಚಿತ್ರೀಕರಣಕ್ಕೆ ಅನುಮತಿ ಕೊಟ್ಟವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ವತಿಯಿಂದ ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.ನಗರದ ಮುಖ್ಯ ಅರಣ್ಯ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಾ, ಯಾವುದೇ ಕಾರಣಕ್ಕೂ ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬಾರದು, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಚಿತ್ರೀಕರಣಕ್ಕೆ ಅನುಮತಿ ಕೊಟ್ಟವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಚಾ.ರಂ.ಶ್ರೀನಿವಾಸಗೌಡ, ಕೇರಳ ಸರ್ಕಾರದ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಮಣೆ ಹಾಕಿ ಅರಣ್ಯ ಸಚಿವರು ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಲು ಮುಂದಾದರೆ ರಾಜ್ಯಾದ್ಯಂತ ಅರಣ್ಯ ಉಳಿಸಬೇಕು, ಪರಿಸರ ಉಳಿಸಬೇಕು ಎಂದು ಅಭಿಯಾನ ಆರಂಭಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲೆಯಾಳಂ ಶೂಟಿಂಗ್ ನಡೆಸಲು ಚಿತ್ರತಂಡ ಒಂದು ಲಕ್ಷ ರುಪಾಯಿ ಕಟ್ಟಿದೆ, ಸರ್ಕಾರಕ್ಕೆ ಗತಿ ಇಲ್ಲವೇ, ನಿಷೇಧಿತ ಪ್ರದೇಶದಲ್ಲಿ ಅದರಲ್ಲೂ ಮಲೆಯಾಳಂ ಭಾಷೆಯ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅತ್ಯಂತ ಖಂಡನೀಯ ಎಂದರು.

ಮಲೆಯಾಳಂ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವರನ್ನು ಅಮಾನತುಪಡಿಸಬೇಕು, ಇಲ್ಲದಿದ್ದರೆ, ಅರಣ್ಯ ಸಚಿವರು ಜಿಲ್ಲೆ ಭೇಟಿಯ ಸಂದರ್ಭದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಯ ನಿಜದ್ವನಿ ಗೋವಿಂದರಾಜು, ಮಹೇಶಗೌಡ, ಸುರೇಶ್, ತಾಂಡವಮೂರ್ತಿ, ಶಿವಣ್ಣ, ವೀರಭದ್ರ, ಸಿದ್ದರಾಜು, ರಾಚಪ್ಪ, ಮೂರ್ತಿ, ಗೋವಿಂದರಾಜು ಇತರರು ಇದ್ದರು.