ಸಾರಾಂಶ
ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ನೇತೃತ್ವದ ತಂಡವೂ ಹುಬ್ಬಳ್ಳಿಯಿಂದ ಲಿಂಗನಬಂಡಿಗೆ ವಿಶೇಷವಾದ ರೈಲಿನಲ್ಲಿ ಆಗಮಿಸಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಕುಷ್ಟಗಿಯಿಂದ ಲಿಂಗನಬಂಡಿ ಹೊಸ ರೈಲು ಮಾರ್ಗದಲ್ಲಿ ಹಳಿಗಳ ಭದ್ರತೆ, ವೇಗದ ಮಿತಿ ಪರಿಶೀಲಿಸಿ ಮೂಲಭೂತ ಸೌಕರ್ಯದ ಕುರಿತು ಮಾಹಿತಿ ಪಡೆಯಲಿದ್ದಾರೆ.
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ಗದಗ-ವಾಡಿ ರೈಲ್ವೆ ಮಾರ್ಗದ ಆರಂಭಿಕ ಹಂತದ ರೈಲು ಮಾರ್ಗದ ಕಾಮಗಾರಿ ಕುಷ್ಟಗಿ ಪಟ್ಟಣದ ವರೆಗೆ ಪೂರ್ಣಗೊಂಡಿದ್ದು ಶುಕ್ರವಾರ ಸಿಆರ್‌ಎಫ್ ತಂಡ ಪ್ರಾಯೋಗಿಕ ಪರೀಕ್ಷೆ ನಡೆಸಲಿದೆ.
ಕುಷ್ಟಗಿಯಿಂದ ಲಿಂಗನಬಂಡಿ ವರೆಗಿನ 10 ಕಿಲೋ ಮೀಟರ್ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಿದ್ದು ಇದು ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ರೈಲು ಓಡಲಿದೆ. ಇದರಿಂದ ಈ ಭಾಗದ ಜನತೆ ಅನುಕೂಲವಾಗುವ ಜತೆಗೆ ಮಾರುಕಟ್ಟೆ, ಕೈಗಾರಿಕೆಗಳು ಅಭಿವೃದ್ಧಿಯಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಹೀಗಾಗಿ ಈ ಭಾಗದ ಜನರು ರೈಲು ಸಂಚಾರದ ದಾರಿಯನ್ನು ಕಾತೂರದಿಂದ ನೋಡುತ್ತಿದ್ದಾರೆ.ಇಂದು ಪರಿಣಿತರ ತಂಡ ಭೇಟಿ:
ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ನೇತೃತ್ವದ ತಂಡವೂ ಹುಬ್ಬಳ್ಳಿಯಿಂದ ಲಿಂಗನಬಂಡಿಗೆ ವಿಶೇಷವಾದ ರೈಲಿನಲ್ಲಿ ಆಗಮಿಸಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಕುಷ್ಟಗಿಯಿಂದ ಲಿಂಗನಬಂಡಿ ಹೊಸ ರೈಲು ಮಾರ್ಗದಲ್ಲಿ ಹಳಿಗಳ ಭದ್ರತೆ, ವೇಗದ ಮಿತಿ ಪರಿಶೀಲಿಸಿ ಮೂಲಭೂತ ಸೌಕರ್ಯದ ಕುರಿತು ಮಾಹಿತಿ ಪಡೆಯಲಿದ್ದಾರೆ. ಮಧ್ಯಾಹ್ನ 3ರಿಂದ 3.30ರ ವರೆಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಿದ್ದಾರೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.ಸುಂದರ ರೈಲು ನಿಲ್ದಾಣ:
ಪಟ್ಟಣದ ರೈಲು ನಿಲ್ದಾಣ ಸಿಂಗಾರಗೊಂಡಿದ್ದು ಗೋಡೆಗಳ ಮೇಲೆ ಐತಿಹಾಸಿಕತೆ ಸಾರುವ ಅಂಜನಾದ್ರಿ, ಹಂಪಿ, ಆನೆಗುಂದಿ, ಇಟಗಿಯ ಮಹಾದೇವ ದೇವಾಲಯ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಗೋಕಾಕ ಜಲಪಾತ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಕಲಾವಿದರ ಕೈಚಳಕದಲ್ಲಿ ಮೂಡಿಬಂದಿವೆ. ನಿಲ್ದಾಣದಲ್ಲಿ ರಸ್ತೆ, ಅಕ್ಕಪಕ್ಕದಲ್ಲಿ ಗಿಡ ಬೆಳೆಸಲಾಗಿದೆ. ಇದು ಎಲ್ಲರನ್ನು ಆಕರ್ಷಿಸಿದ್ದು ಬಂದವರೆಲ್ಲ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.ಜಂಕ್ಷನ್ ನಿರ್ಮಿಸಿ:
ಕುಷ್ಟಗಿ ನಿಲ್ದಾಣವನ್ನು ಕೇವಲ ನಿಲ್ದಾಣವನ್ನಾಗಿ ಮಾಡದೆ ಜಂಕ್ಷನ್ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಮೂಲಕ ದರೋಜಿ-ಬಾಗಲಕೋಟ, ಚಿತ್ರದುರ್ಗ-ಆಲಮಟ್ಟಿ, ಘಟಪ್ರಭಾ-ಕುಷ್ಟಗಿ, ಸದ್ಯ ಆರಂಭವಾಗಿರುವ ಗದಗ-ವಾಡಿಗೆ ರೈಲು ಸಂಚರಿಸಲು ಅನುಕೂಲವಾಗಿದೆ ಎಂದು ಆಗ್ರಹಿಸಿದ್ದಾರೆ.ಕೆಲವು ಪ್ರಾಯೋಗಿಕ ಪರೀಕ್ಷೆ ಮುಗಿದಿದ್ದು ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದಲ್ಲಿ ಇಂದು ಅಂತಿಮ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಅವರ ವರದಿ ನಂತರ ರೈಲ್ವೆ ಸಂಚಾರದ ಕುರಿತು ಮುಂದಿನ ಕ್ರಮ ವಹಿಸಲಾಗುವುದು. ಈಗಾಗಲೆ ರೈಲ್ವೆ ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ.ಅಶೋಕ ಮುದಗೌಡರ ಎಇಇ ನೈಋತ್ಯ ರೈಲ್ವೆ ಪ್ರಾಯೋಗಿಕ ರೈಲು ಓಡಾಟಕ್ಕೆ ಸೀಮಿತವಾಗಬಾರದು. ಆದಷ್ಟು ಶೀಘ್ರದಲ್ಲಿ ರೈಲು ಸಂಚಾರ ಆರಂಭಿಸಬೇಕು. ಜತೆಗೆ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಒದಗಿಸಬೇಕು.
ಬಸವರಾಜ ಗಾಣಿಗೇರ ಹೋರಾಟಗಾರ