ಬಿಬಿಎಂಪಿ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಹೊಸ ಗುತ್ತಿಗೆದಾರರನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

 ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಗೆ ಹೊಸ ಗುತ್ತಿಗೆದಾರರನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

₹132 ಕೋಟಿ ಅಂದಾಜು ವೆಚ್ಚದಲ್ಲಿ ನಾಲ್ಕು ಪ್ಯಾಕೇಜ್‌ನಲ್ಲಿ ಬಿಬಿಎಂಪಿಯ ಎಂಟು ವಲಯದ 192 ಇಂದಿರಾ ಕ್ಯಾಂಟೀನ್‌ಗೆ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಪೂರೈಕೆಗೆ ಟೆಂಡರ್‌ ಆಹ್ವಾನಿಸಲಾಗಿತ್ತು. ಈ ಪೈಕಿ ದಾಸರಹಳ್ಳಿ ಮತ್ತು ಪಶ್ಚಿಮ ವಲಯದ ಟೆಂಡರ್‌ಗೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಉಳಿದ ಆರು ವಲಯದ ಮೂರು ಪ್ಯಾಕೇಜ್‌ಗಳನ್ನು ಮಾತ್ರ ಇದೀಗ ಅಂತಿಮ ಪಡಿಸಲಾಗಿದೆ.

ಎರಡು ವರ್ಷದ ಅವಧಿಗೆ ಸತೀಶ್‌ ಕುಮಾರ್‌ ಮಾಲೀಕತ್ವದ ಆರ್‌ಇಡಬ್ಲ್ಯೂಎಆರ್‌ಡಿಎಸ್‌ ಸಂಸ್ಥೆಗೆ ಆರು ವಲಯದ 142 ಕ್ಯಾಂಟೀನ್‌ಗೆ ಆಹಾರ ಪೂರೈಕೆಯ ಗುತ್ತಿಗೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ ಸ್ಥಾಪಿಸುವ 50 ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಎರಡು ಇಂದಿರಾ ಕ್ಯಾಂಟೀನ್‌ಗೂ ಆಹಾರ ಪೂರೈಕೆ ಮಾಡಬೇಕೆಂದು ಷರತ್ತು ವಿಧಿಸಲಾಗಿದೆ.

ಬೆಳಗಿನ ಉಪಹಾರಕ್ಕೆ ₹15, ಮಧ್ಯಾಹ್ನದ ಊಟಕ್ಕೆ ₹6.51 ಹಾಗೂ ರಾತ್ರಿ ಊಟಕ್ಕೆ ₹10 ದರ ನಿಗದಿ ಪಡಿಸಲಾಗಿದೆ. ಆರು ವಲಯಕ್ಕೆ ಎರಡು ವರ್ಷಕ್ಕೆ ₹77.12 ಕೋಟಿ ವೆಚ್ಚ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.