ಗಣೇಶನ ಹಬ್ಬಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಸಂಭ್ರಮದ ಹೊನಲು ಜತೆಗೆ ಬಣ್ಣದ ವೈವಿಧ್ಯಮಯ ಮೂರ್ತಿ ಕಣ್ಣುಂಬಿಸಿಕೊಳ್ಳಲು ಹಿರಿಯರು-ಮಕ್ಕಳು ಸೇರಿ ಎಲ್ಲರೂ ಹಾತೊರೆಯುತ್ತಾರೆ.

ಗಣೇಶ ಹಬ್ಬ ಕ್ಷಣಗಣನೆ ಆರಂಭ । ತಾಲೂಕಿನಲ್ಲಿ ಸಂಭ್ರಮದಿಂದ ಸಾಗುತ್ತಿದೆ ತಯಾರಿ

ಎಸ್.ಎಂ. ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಗಣೇಶನ ಹಬ್ಬಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಸಂಭ್ರಮದ ಹೊನಲು ಜತೆಗೆ ಬಣ್ಣದ ವೈವಿಧ್ಯಮಯ ಮೂರ್ತಿ ಕಣ್ಣುಂಬಿಸಿಕೊಳ್ಳಲು ಹಿರಿಯರು-ಮಕ್ಕಳು ಸೇರಿ ಎಲ್ಲರೂ ಹಾತೊರೆಯುತ್ತಾರೆ. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಬಡಾವಣೆ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಸ್ಥಳೀಯ ಚಿತ್ರಗಾರ ಸೇರಿದಂತೆ ಅನೇಕ ಕಲಾವಿದರು ಈಗಾಗಲೇ ವಿಘ್ನನಿವಾರಕನ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಪಟ್ಟಣದಲ್ಲಿ ಚಿತ್ರಗಾರ, ಬಡಿಗೇರ, ಕಂಚಗಾರ, ಗಾಯಕವಾಡ ಸೇರಿ ಕೆಲ ಕುಟುಂಬಗಳು ಹಿಂದಿನಿಂದಲೂ ಮಣ್ಣು ಹದಗೊಳಿಸಿ ಆಕರ್ಷಕ ಗಣಪತಿ ವಿಗ್ರಹ ಮಾಡುವ ಕಲಾವಿದರು. ಬೆಳಕಿಗೆ ಬಾರದೇ ಎಷ್ಟೋ ಕಲಾವಿದರೂ ಯಾವುದೋ ಮೂಲೆಯ ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಕಲೆ ಅಭಿವ್ಯಕ್ತಿಸುತ್ತ ಹಾಗೆಯೇ ಎಲೆಮರೆಯ ಕಾಯಿ ಎಂತಿರುತ್ತಾರೆ. ಗಣಪತಿ ವಿಗ್ರಹಗಳನ್ನು ಸುಂದರವಾಗಿ ತಯಾರು ಮಾಡಿ, ಅದರಿಂದ ಬರುವ ಕಾಸಿನಲ್ಲಿ ವರ್ಷವಿಡೀ ಜೀವನ ನಡೆಸುತ್ತಿರುವ ಅಪ್ರತಿಮ ಕಲಾವಿದರು. ಈ ಭಾಗದಲ್ಲಿ ಕಲೆಯನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ.

ಗಣೇಶ ಚತುರ್ಥಿಗೆ ತಿಂಗಳ ಮುಂಚೆಯೇ ಮಳೆಗಾಲದ ಬಿಡುವಿನಲ್ಲಿ ಜೇಡಿ ಮಣ್ಣನ್ನು ಸಂಗ್ರಹಿಸಿ ಹದಗೊಳಿಸಿ ಗಣಪತಿ ಮೂರ್ತಿ ತಯಾರಿಸುವುದು ಇವರ ಸಂಪ್ರದಾಯ. ಭಕ್ತರೆಲ್ಲರೂ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸಬೇಕು. ಮೂರ್ತಿಗಳು ಜನರಿಗೆ ನೆಮ್ಮದಿ ನೀಡಬೇಕು ಎಂಬುದು ಈ ಕುಟುಂಬಗಳ ಆಶಯ. ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಪೂಜೆ ಮಾಡುವುದಕ್ಕೆ ಶ್ರೇಷ್ಠವಾಗಿದ್ದು, ಬಹುತೇಕ ಎಲ್ಲರೂ ಇಷ್ಟಪಡುವರು. ಕಲಾವಿದರ ಕೈ ಚಳಕ ಹಾಗೂ ಚತುರತೆ ಕಾಣುವುದು ಮಣ್ಣಿನ ಮೂರ್ತಿಗಳಲ್ಲಿ ಕಲಾ ಕುಂಚದಿಂದ ಕಲೆ ರಚಿಸಿ ಕಲೆಗೆ ಜೀವ ತುಂಬುತ್ತಾರೆ.

ಪಟ್ಟಣದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ಬಹುತೇಕವಾಗಿ ಉಣಚಗೇರಿ ಗ್ರಾಮದ ಗಾಯಕವಾಡ ಕುಟುಂಬದವರು ಸಿದ್ಧಪಡಿಸಿದ್ದೆ ಆಗಿರುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಪ್ರತಿಷ್ಠಾಪಿಸುವ ಚಿಕ್ಕ ಹಾಗೂ ದೊಡ್ಡ ಗಣಪತಿ ಮೂರ್ತಿಗಳನ್ನು ನೆರೆಯ ಜಿಲ್ಲೆಗಳಿಂದ ತರುತ್ತಿರುವುದು ಇಲ್ಲಿನ ಕಲಾವಿದರ ಕುಟುಂಬಗಳಿಗೆ ಹೊಡೆತ ಬಿಳುತ್ತಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣ ವೇದಿಕೆ ಬಳಸಿಕೊಂಡು ಕೆಲವರು ವ್ಯಾಪಾರಕ್ಕೆ ಮುಂದಾಗಿದ್ದಾರೆ. ಪರಿಣಾಮ ಬೆಳಗಾವಿ ಹಾಗೂ ಗೋಕಾಕ ಪಟ್ಟಣದಿಂದ ಮೂರ್ತಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಅದರಲ್ಲಿ ಇಲ್ಲಿನ ವೆಂಕಪ್ಪ ಕಾಳಪ್ಪ ಸವದಿ ಕುಟುಂಬಸ್ಥರು ನೆರೆಯ ರಾಮದುರ್ಗದಿಂದ ತರಿಸುವ ಗಣಪತಿ ಮೂರ್ತಿಗಳಿಗೆ ಪೇಟ ಹಾಗೂ ಮುತ್ತಿನ ಸರ ಕೂಡಿಸಿ ಮತ್ತಷ್ಟು ಆಕರ್ಷಕ ಮೂರ್ತಿ ಸಿದ್ಧಪಡಿಸುತ್ತಿದ್ದಾರೆ.ಪಟ್ಟಣದಲ್ಲಿ ಗಣಪತಿ ಹಬ್ಬಕ್ಕೆ ಭಕ್ತರು ಪೇಟ ಹಾಗೂ ಮುತ್ತಿನ ಜೋಡಣೆ ಮಾಡಿದ ಗಣಪತಿ ಮೂರ್ತಿಗಳನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ಮುತ್ತಿನ ಜೋಡಣೆ ಜತೆಗೆ ಪೇಟ ತೊಡಿಸಲಾಗುತ್ತದೆ. ಭಕ್ತರ ಬೇಡಿಕೆಗೆ ಅನುಗಣುವಾಗಿ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಲಾಗುತ್ತದೆ ಗಣಪತಿ ಮೂರ್ತಿ ಮಾರಾಟಗಾರ ಪ್ರವೀಣ ಸವದಿ.