ಕೊನೆಗೂ ಪುತ್ತೂರಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ:ಬಹುಕಾಲದ ಬೇಡಿಕೆಗೆ ಬಜೆಟ್‌ನಲ್ಲಿ ಅವಕಾಶ

| Published : Mar 07 2025, 11:45 PM IST

ಕೊನೆಗೂ ಪುತ್ತೂರಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ:ಬಹುಕಾಲದ ಬೇಡಿಕೆಗೆ ಬಜೆಟ್‌ನಲ್ಲಿ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

೨೦೨೩ರ ಚುನಾವಣೆಯ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯು ಪುತ್ತೂರಿನ ಸಾರ್ವಜನಿಕರ ಬಹುಮುಖ್ಯ ಬೇಡಿಕೆಯಾಗಿ ಮೂಡಿ ಬಂದಿತ್ತು. ಆ ಸಂದರ್ಭದಲ್ಲಿ ಮತದಾರರಿಗೆ ಮೆಡಿಕಲ್ ಕಾಲೇಜು ಬಗ್ಗೆ ಭರವಸೆ ನೀಡಿದ್ದ ಅಶೋಕ್ ರೈ ಅವರು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದರು. ಈ ಬಜೆಟ್ ನಲ್ಲಿ ಕಾಲೇಜು ಘೋಷಣೆಯಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಈ ಬಾರಿಯ ಬಜೆಟ್‌ನಲ್ಲಿ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಮಂಜೂರುಗೊಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಬಜೆಟ್ ಮಂಡಿಸುತ್ತಾ ಈ ಬಗ್ಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು ‘ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ೧೦೦ ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು ಉನ್ನತೀಕರಿಸಿ ಪ್ರಸ್ತುತ ವರ್ಷದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಇದರೊಂದಿಗೆ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಬೇಕು ಎಂಬ ಈ ಭಾಗದ ಸಾರ್ವಜನಿಕರ ಬಹುಕಾಲದ ಬೇಡಿಕೆಯು ಈಡೇರುವ ಭರವಸೆ ಮೂಡಿದೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕು ಎಂಬುದು ಕೇವಲ ಪುತ್ತೂರು ಮಾತ್ರವಲ್ಲ, ಸುತ್ತಲಿನ ತಾಲೂಕುಗಳಾದ ಸುಳ್ಯ, ಕಡಬ, ಬೆಳ್ತಂಗಡಿ ಭಾಗದ ಜನರದ್ದೂ ಬೇಡಿಕೆಯಾಗಿತ್ತು. ಹಿಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆಂದು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ಎಂಬಲ್ಲಿ ೪೦ ಎಕ್ರೆ ಜಮೀನು ಮಂಜೂರುಗೊಳಿಸಿದ್ದರು. ಬಳಿಕ ಶಾಸಕರಾದ ಸಂಜೀವ ಮಠಂದೂರು ಅವರು ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಪೂರಕವಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಯನ್ನು ೩೦೦ ಬೆಡ್‌ಗೆ ಮೇಲ್ದರ್ಜೆರಿಸುವ ಕಾರ್ಯಕ್ಕೆ ಪೂರ್ವ ತಯಾರಿ ನಡೆಸಿದ್ದರು. ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಸುತ್ತಲಿನ ಸುಮಾರು ೬ ಎಕ್ರೆ ಜಾಗವನ್ನು ಆಸ್ಪತ್ರೆಯ ಹೆಸರಿಗೆ ಪಹಣಿ ಪತ್ರ ಮಾಡಿಸಿದ್ದರು. ಆದರೆ ಸೇಡಿಯಾಪುವಿನಲ್ಲಿ ಮೆಡಿಕಲ್ ಕಾಲೇಜ್‌ಗೆ ಮಂಜೂರುಗೊಂಡಿದ್ದ ಜಮೀನು ನೆನೆಗುದಿಗೆ ಬಿದ್ದಿತ್ತು. ಈ ನಡುವೆ ಕಳೆದ ಸುಮಾರು ೮ ವರ್ಷಗಳ ಹಿಂದೆ ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಎಂ.ಬಿ. ವಿಶ್ವನಾಥ ರೈ ಮತ್ತಿತರ ನೇತೃತ್ವದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಆರಂಭಗೊಂಡು ವಿವಿಧ ರೀತಿಗಳಲ್ಲಿ ಹೋರಾಟ ನಡೆಸುತ್ತಾ ಸರ್ಕಾರಕ್ಕೆ ಒತ್ತಡ ತರುವ ಕೆಲಸ ಮಾಡುತ್ತಲೇ ಬಂದಿತ್ತು. ಈ ಬಗ್ಗೆ ಹೋರಾಟ ಸಮಿತಿಯಿಂದ ವಿಚಾರ ಸಂಕಿರಣ, ಜಾಥಾ, ಸಹಿ ಸಂಗ್ರಹ ಅಭಿಯಾನ, ಕರಪತ್ರ ಹಂಚಿಕೆ, ಮೆರವಣಿಗೆ, ಜನಜಾಗೃತಿ ಸಭೆಗಳು ಇತ್ಯಾದಿಗಳನ್ನು ನಡೆಸಲಾಗಿತ್ತು. ಶಾಸಕ ಅಶೋಕ್‌ ರೈ ಅವಿರತ ಪ್ರಯತ್ನ:

೨೦೨೩ರ ಚುನಾವಣೆಯ ಸಂದರ್ಭದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯು ಪುತ್ತೂರಿನ ಸಾರ್ವಜನಿಕರ ಬಹುಮುಖ್ಯ ಬೇಡಿಕೆಯಾಗಿ ಮೂಡಿ ಬಂದಿತ್ತು. ಆ ಸಂದರ್ಭದಲ್ಲಿ ಮತದಾರರಿಗೆ ಮೆಡಿಕಲ್ ಕಾಲೇಜು ಬಗ್ಗೆ ಭರವಸೆ ನೀಡಿದ್ದ ಅಶೋಕ್ ರೈ ಅವರು ನಿರಂತರ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದರು. ೨೦೨೪ರ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ಘೋಷಣೆ ಮಾಡಿರಲಿಲ್ಲ. ಬಳಿಕದ ಬೆಳವಣಿಗೆಯಲ್ಲಿ ಶಾಸಕ ಅಶೋಕ್ ರೈ ಅವರು ೨೦೨೫ರ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆ ಮಾಡದಿದ್ದಲ್ಲಿ ಸಾರ್ವಜನಿಕರೊಂದಿಗೆ ಪುತ್ತೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಅವರಿಗೆ ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ವಿಶ್ವಾಸವನ್ನು ನೀಡಿದ್ದರು. ಇದೀಗ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜ್ ಘೋಷಣೆಯಾಗಿದೆ. ೩೦೦ ಬೆಡ್‌ನ ಆಸ್ಪತ್ರೆ ಅಗತ್ಯ: ಮೆಡಿಕಲ್ ಕಾಲೇಜು ಮಂಜೂರಾತಿ ಆಗಬೇಕಿದ್ದಲ್ಲಿ ಅದಕ್ಕೆ ಪೂರಕವಾಗಿ ೩೦೦ ಬೆಡ್‌ಗಳ ಆಸ್ಪತ್ರೆಯ ಅಗತ್ಯವಿದೆ. ಇದರಿಂದಾಗಿ ಈಗಾಗಲೇ ೧೦೦ ಬೆಡ್‌ಗಳ ಆಸ್ಪತ್ರೆಯಾದ ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ. ಮೆಡಿಕಲ್ ಕಾಲೇಜ್‌ಗೆಂದು ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಎಂಬಲ್ಲಿ ಈಗಾಗಲೇ ಜಮೀನು ಮಂಜೂರಾತಿಗೊಂಡು ಪಹಣಿ ಪತ್ರವೂ ಆಗಿದೆ. ಅಲ್ಲಿಂದ ಪುತ್ತೂರಿನ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸುಮಾರು ೧೦ ಕಿ.ಮೀ ದೂರವಿದೆ. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಹಿಂದಿನ ಶಾಸಕ ಸಂಜೀವ ಮಠಂದೂರು ಅವರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅಲ್ಲದೆ ಆಸ್ಪತ್ರೆಯ ಸುತ್ತ ಮುತ್ತಲಿನ ಸುಮಾರು ೬ ಎಕ್ರೆ ಜಮೀನು ಆಸ್ಪತ್ರೆಯ ಹೆಸರಿಗೆ ಮಂಜೂರುಗೊಳಿಸುವ ಕೆಲಸವನ್ನೂ ಮಾಡಿದ್ದರು. ಮೆಡಿಕಲ್ ಕಾಲೇಜ್ ಸಮೀಪದಲ್ಲಿಯೇ ೩೦೦ ಬೆಡ್‌ನ ಆಸ್ಪತ್ರೆಯನ್ನು ನೂತನವಾಗಿ ನಿರ್ಮಿಸಬೇಕು ಎಂಬುದು ಈಗಿನ ಶಾಸಕ ಆಶೋಕ್ ಕುಮಾರ್ ರೈ ಅವರ ಚಿಂತನೆಯಾಗಿದೆ. ಅದಕ್ಕಾಗಿ ಅವರು ಮೆಡಿಕಲ್ ಕಾಲೇಜ್‌ಗೆ ಜಮೀನು ಮಂಜೂರುಗೊಂಡಿರುವ ಸೇಡಿಯಾಪುವಿನಲ್ಲಿಯೇ ನೂತನ ಆಸ್ಪತ್ರೆಯ ನಿರ್ಮಾಣ ಮಾಡುವ ಬಗ್ಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಆರಂಭಗೊಳ್ಳುವ ಮೊದಲಿಗೆ ೩೦೦ ಬೆಡ್‌ನ ಆಸ್ಪತ್ರೆ ಸಿದ್ದಗೊಳ್ಳಬೇಕಾಗಿದೆ.