ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ ಉತ್ತರ ಕನ್ನಡದ ಹೆಸರಿನಲ್ಲಿ ಉಡುಪಿಯ ಸಾಧಕರೊಬ್ಬರ ಹೆಸರು ಸೇರಿರುವುದು ಚರ್ಚೆಗೆ ಕಾರಣವಾಗಿತ್ತು. ಜಿಲ್ಲೆಯ ಸಾಧಕರನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿತ್ತು.

ವಸಂತಕುಮಾರ್ ಕತಗಾಲ

ಕಾರವಾರ: ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಪರಿಸರ ಸಂರಕ್ಷಣೆ, ಸಮಾಜಸೇವೆ ಹಾಗೂ ಕ್ರೀಡೆ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಮಹತ್ವದ ಕೊಡುಗೆ ನೀಡಿರುವ ಉತ್ತರ ಕನ್ನಡ ಜಿಲ್ಲೆಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಆರಂಭದಲ್ಲಿ ಅನ್ಯಾಯವಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರ ಪ್ರಕಟಿಸಿದ್ದ 71 ಸಾಧಕರ ಪಟ್ಟಿಯಲ್ಲಿ ಜಿಲ್ಲೆಯ ಒಬ್ಬರಿಗೂ ಸ್ಥಾನ ದೊರೆತಿರಲಿಲ್ಲ. ಆದರೆ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ, ಪತ್ರಿಕಾ ಹಾಗೂ ಸಾಮಾಜಿಕ ವಲಯಗಳಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಪ್ರಶಸ್ತಿ ಪಟ್ಟಿಯನ್ನು ಪರಿಷ್ಕರಿಸಿದ್ದು, ಉಡುಪಿಯ ಸಾಧಕರ ಹೆಸರಿನ ಬದಲಿಗೆ ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರಿಗೆ ಪ್ರಶಸ್ತಿ ಘೋಷಿಸಿದೆ.

ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾದಾಗ ಉತ್ತರ ಕನ್ನಡದ ಹೆಸರಿನಲ್ಲಿ ಉಡುಪಿಯ ಸಾಧಕರೊಬ್ಬರ ಹೆಸರು ಸೇರಿರುವುದು ಚರ್ಚೆಗೆ ಕಾರಣವಾಗಿತ್ತು. ಜಿಲ್ಲೆಯ ಸಾಧಕರನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪವೂ ವ್ಯಕ್ತವಾಗಿತ್ತು. ಇದೀಗ ಸರ್ಕಾರದ ಪರಿಷ್ಕೃತ ಪಟ್ಟಿಯಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಿಗೆ ಸ್ಥಾನ ದೊರೆತಿರುವುದು ಈ ಬೆಳವಣಿಗೆಗೆ ಹೊಸ ತಿರುವು ನೀಡಿದೆ.

ಸಾಧಕರಿಗೆ ಬರವಿಲ್ಲದ ಜಿಲ್ಲೆ!: ಉತ್ತರ ಕನ್ನಡ ಎಂದರೆ ಕೇವಲ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಜಿಲ್ಲೆಯಲ್ಲ. ಇದು ಕಲೆ, ಸಾಹಿತ್ಯ, ಯಕ್ಷಗಾನ, ಜಾನಪದ ಮತ್ತು ಪರಿಸರ ಹೋರಾಟಗಳ ಸಮೃದ್ಧ ನೆಲ. ಬಡಗುತಿಟ್ಟಿನ ಯಕ್ಷಗಾನ ಪರಂಪರೆಯನ್ನು ಉಳಿಸಿ ಬೆಳೆಸಿದ ಹಿರಿಯ ಕಲಾವಿದರು, ಭಾಗವತರು, ಮದ್ದಳೆಗಾರರು, ಜಾನಪದ ವಿದ್ವಾಂಸರು, ಸಾಹಿತಿಗಳು, ಸಂಶೋಧಕರು ಹಾಗೂ ಅನುವಾದಕರು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ದಶಕಗಳಿಂದ ಕಲೆಯನ್ನೇ ಬದುಕಾಗಿಸಿಕೊಂಡು ಸೇವೆ ಸಲ್ಲಿಸುತ್ತಿರುವ ಅನೇಕ ಹಿರಿಯ ಕಲಾವಿದರಿದ್ದಾರೆ.ಅಪ್ಪಿಕೊ ಚಳವಳಿಯ ಮೂಲಕ ದೇಶದ ಗಮನ ಸೆಳೆದ ಜಿಲ್ಲೆಯು ಪರಿಸರ ಸಂರಕ್ಷಣೆಯಲ್ಲೂ ವಿಶಿಷ್ಟ ಇತಿಹಾಸ ಹೊಂದಿದೆ. ಹಾಲಕ್ಕಿ ಒಕ್ಕಲಿಗ, ಸಿದ್ಧಿ, ಕುಣುಬಿ ಹಾಗೂ ಗೌಳಿ ಸಮುದಾಯಗಳ ವಿಶಿಷ್ಟ ಕಲೆ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಅನೇಕ ಹಿರಿಯ ಸಾಧಕರಿದ್ದಾರೆ. ಸಾಹಿತ್ಯ, ಶಿಕ್ಷಣ, ವೈದ್ಯಕೀಯ, ಕ್ರೀಡೆ, ಸಮಾಜಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿದ್ದಾರೆ.ಆಕ್ಷೇಪದ ಬೆನ್ನಲ್ಲೇ ಪರಿಷ್ಕರಣೆ: ಪ್ರಶಸ್ತಿ ಪಟ್ಟಿಯಲ್ಲಿ ಜಿಲ್ಲೆಯ ಸಾಧಕರಿಗೆ ಅವಕಾಶ ದೊರೆಯದಿರುವುದನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳು ಹಾಗೂ ಗಣ್ಯರು ಪ್ರಶ್ನಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಅವರು ಜಿಲ್ಲೆಯ ಸಾಂಸ್ಕೃತಿಕ ಅಸ್ಮಿತೆಗೆ ಧಕ್ಕೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಪ್ರಶಸ್ತಿ ಪಟ್ಟಿಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದರು. ಬಿಜೆಪಿ ರಾಜ್ಯ ಉಪಾದ್ಯಕ್ಷೆ ರೂಪಾಲಿ ನಾಯ್ಕ ಜಿಲ್ಲೆಯ ಹಿತಾಸಕ್ತಿ ಕಾಪಾಡುವಲ್ಲಿ ಆಡಳಿತ ಪಕ್ಷದ ಶಾಸಕರು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಕೂಡ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಉತ್ತರ ಕನ್ನಡದವರು ಎಂಬುದನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಜಿಲ್ಲೆಗೆ ಅನ್ಯಾಯವಾಗಿದ್ದರೆ ಪರಿಶೀಲಿಸುವುದಾಗಿ ತಿಳಿಸಿದ್ದರು.

ಸರ್ಕಾರ ಇದೀಗ ಪ್ರಶಸ್ತಿ ಪಟ್ಟಿಯನ್ನು ಪರಿಷ್ಕರಿಸಿ ಹೊನ್ನಾವರದ ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಇದರಿಂದ ಆರಂಭದಲ್ಲಿ ಪ್ರಶಸ್ತಿ ಪಟ್ಟಿಯಲ್ಲಿ ಉತ್ತರ ಕನ್ನಡಕ್ಕೆ ದೊರೆತಿದ್ದ ಶೂನ್ಯ ಸ್ಥಾನ ಬದಲಾಗಿದೆ. ಜಿಲ್ಲೆಯ ಸಾಧಕರಿಗೆ ಸೂಕ್ತ ಗೌರವ ದೊರೆಯಬೇಕೆಂಬ ಕೂಗಿಗೆ ಸರ್ಕಾರದ ಪರಿಷ್ಕೃತ ನಿರ್ಧಾರದಿಂದ ಪ್ರತಿಕ್ರಿಯೆ ಸಿಕ್ಕಂತಾಗಿದೆ.ಜಿ.ಯು. ಭಟ್‌ಗೆ ರಾಜ್ಯೋತ್ಸವ ಗೌರವ

ಕಾರವಾರ: ಐದು ದಶಕಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಹೊನ್ನಾವರದ ಹಿರಿಯ ಪತ್ರಕರ್ತ ಗಜಾನನ ಉಮಾಮಹೇಶ್ವರ ಭಟ್(ಜಿ.ಯು. ಭಟ್) ಅವರ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಸಂದಿದೆ.

1948ರ ಮೇ 3ರಂದು ಜನಿಸಿದ ಇವರು, ಸೇಂಟ್ ಥಾಮಸ್ ಹೈಸ್ಕೂಲ್ ಹಾಗೂ ಎಸ್ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಉದಯವಾಣಿಯಲ್ಲಿ ಹಿರಿಯ ವರದಿಗಾರರಾಗಿ 55 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಸಂಯುಕ್ತ ಕರ್ನಾಟಕದ ಹೊನ್ನಾವರ ವರದಿಗಾರರಾಗಿ ಹತ್ತು ವರ್ಷ ಕಾರ್ಯನಿರ್ವಹಿಸಿದ್ದಾರೆ. ಗ್ರಾಮೀಣ ವಿಕಾಸ ಹಾಗೂ ಸಮನ್ವಯ ವಾರಪತ್ರಿಕೆಗಳ ಸಂಪಾದಕರಾಗಿಯೂ ಗುರುತಿಸಿಕೊಂಡಿದ್ದಾರೆ.

ನಾಟಕ, ರಂಗಭೂಮಿ, ಕಿರುಕಥೆ, ಚಲನಚಿತ್ರ, ಸಹಕಾರ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿರುವ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪತ್ರಿಕಾ ಅಕಾಡೆಮಿ, ರಾಜ್ಯ ನಾಟಕ ಅಕಾಡೆಮಿ ಸೇರಿದಂತೆ ವಿವಿಧ ಪ್ರಶಸ್ತಿ ಗೌರವಗಳಿಗೆ ಭಾಜನರಾಗಿದ್ದಾರೆ. ಹಿರಿಯ ಪತ್ರಕರ್ತರಾಗಿ ಜಿಲ್ಲೆಯ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಗಮನಾರ್ಹವಾಗಿದೆ.