ಕೊನೆಗೂ ಕೊಟ್ಟೂರಿಗೆ ಬಿಇಒ ಕಚೇರಿ?

| Published : Apr 27 2025, 01:46 AM IST

ಸಾರಾಂಶ

ಏಳು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಕೊಟ್ಟೂರು ತಾಲೂಕಿನಲ್ಲಿ ಬಿಇಒ ಕಚೇರಿ ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಈ ಬೆಳವಣಿಗೆ ತಾಲೂಕಿನ ಶಿಕ್ಷಣಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

ಜಿ. ಸೋಮಶೇಖರ

ಕೊಟ್ಟೂರು: 7 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಕೊಟ್ಟೂರು ತಾಲೂಕಿನಲ್ಲಿ ಬಿಇಒ ಕಚೇರಿ ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಈ ಬೆಳವಣಿಗೆ ತಾಲೂಕಿನ ಶಿಕ್ಷಣಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.

ಹೊಸ ಬಿಇಒ ಕಚೇರಿ ತೆರೆಯುವ ಸಂಬಂಧ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತರು ಏ. 23ರಂದು ಸುತ್ತೋಲೆ ಹೊರಡಿಸಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಸೃಜನೆ ಸಮಿತಿ ಸಭೆ ನಡೆಸಲು ಈ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಸರ್ಕಾರ ಯಾವುದೇ ಬಗೆಯ ಹೊಸ ಹುದ್ದೆ ಸೃಜನೆ ಮಾಡುತ್ತಿಲ್ಲ. ಹಾಲಿ ಇಲಾಖೆಯಲ್ಲಿರುವ ಕೆಲವರನ್ನು ಹೊಸದಾಗಿ ರಚನೆಗೊಳ್ಳುವ ಬಿಇಒ ಕಚೇರಿಗೆ ನಿಯೋಜನೆ ಅಥವಾ ವರ್ಗಾವಣೆಯಾಗಲಿದ್ದಾರೆ. ಒಟ್ಟಾರೆ ಬಿಇಒ ಕಚೇರಿ ರಚನೆಗೊಡಿರುವ ಹೊಸ ತಾಲೂಕುಗಳಲ್ಲಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಅಪರ ಆಯುಕ್ತರ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದಕ್ಕೆ ಪೂರಕವಾಗಿ ಕೊಟ್ಟೂರಿನಲ್ಲಿ ಬಿಇಒ ಕಚೇರಿ ಆರಂಭಿಸುವ ಸಂಬಂಧ ಕ್ಲಸ್ಟರ್‌ಗಳು, ಶಾಲೆಗಳ ಮತ್ತು ಹೊಸ ಶೈಕ್ಷಣಿಕ ವಲಯದ ಪಟ್ಟಿ ತಯಾರಿಸುವ ಕಾರ್ಯವನ್ನು ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕೂಡ್ಲಿಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆರಂಭಿಸಿದೆ. ಈ ಸಂಬಂಧ ಮೇ 30ರಂದು ಡಿಡಿಪಿಐ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಇಒ ಕಚೇರಿ ಆರಂಭಿಸಲು ಅಗತ್ಯವಾಗಿ ಬಿಇಒ, ಸಹಾಯಕ ನಿರ್ದೇಶಕ, ಅಧಿಕ್ಷಕರ ತಲಾ ಒಂದು ಹುದ್ದೆ, ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು, ಎರಡು ಸೇವಕ ಹುದ್ದೆ ಸೇರಿದಂತೆ 10 ಹುದ್ದೆಗಳನ್ನು ಸೃಜಿಸಬೇಕಿದೆ.

ಜಿಪಂ ಸಿಇಒ ಅಧ್ಯಕ್ಷತೆಯ ಸೃಜನೆ ಸಮಿತಿಯಲ್ಲಿ ಡಿಡಿಪಿಐ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಡಯಟ್ ಪ್ರಾಶುಪಾಲರು, ಸಂಬಂಧಿಸಿದ ಬಿಇಒ, ಮಧ್ಯಾಹ್ನದ ಉಪಾಹಾರ ಯೋಜನೆ ಜಿಲ್ಲಾ ಶಿಕ್ಷಣಾಧಿಕಾರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸದಸ್ಯರಾಗಿದ್ದಾರೆ. ಜಿಪಂ ಸಿಇಒ ಮಾರ್ಗದರ್ಶನ ಮತ್ತು ಸೂಚನೆಯಂತೆ ಕಚೇರಿ ಆರಂಭಿಸುವ ಪ್ರಕ್ರಿಯೆ, ಇನ್ನಿತರ ಚಟುವಟಿಕೆ ಕುರಿತು ಪ್ರಸ್ತಾವನೆಯನ್ನು ಮೇ 3ರ ಒಳಗೆ ಅಪರ ಆಯುಕ್ತರ ಕಚೇರಿಗೆ ಸಲ್ಲಿಸಲು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಎಲ್ಲ ಬೆಳವಣಿಗೆ ಕೊಟ್ಟೂರಿನಲ್ಲಿ ಬಿಇಒ ಕಚೇರಿ ಆರಂಭವಾಗುವುದಕ್ಕೆ ಮುನ್ಸೂಚನೆಯಾಗಿದ್ದು, ಬರುವ ಜೂನ್‌ನಿಂದ ಕಚೇರಿ ಪಟ್ಟಣದ ತಾಪಂ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡದಲ್ಲಿ ಆರಂಭಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ.

ಮೇ 30ರಂದು ಸಭೆ: ಕಲಬುರಗಿ ಅಪರ ಆಯುಕ್ತರ ಸುತ್ತೋಲೆ ಅನ್ವಯ ಕೊಟ್ಟೂರು ತಾಲೂಕು ವ್ಯಾಪ್ತಿಗೆ ಬರುವ ಶಾಲೆಗಳ ಮತ್ತು ಇತರ ಶೈಕ್ಷಣಿಕ ಚಟುವಟಿಕೆ ಮಾಹಿತಿ ಕಲೆ ಹಾಕುತ್ತಿದ್ದು, ಡಿಡಿಪಿಐ ಅವರು ಈ ಸಂಬಂಧ ಮೇ 30ರಂದು ಸಭೆ ಕರೆಯುವ ಸಂಭವ ಇದೆ. ಈ ಸಭೆಯಲ್ಲಿ ಕೊಟ್ಟೂರಿನಲ್ಲಿ ಬಿಇಒ ಕಚೇರಿ ತೆರೆಯುವ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಿವೆ ಎಂದು ಕೂಡ್ಲಿಗಿ ಬಿಇಒ ಪದ್ಮನಾಭ ಕರಣಂ ಹೇಳುತ್ತಾರೆ.