ಸಾರಾಂಶ
ಕಾರವಾರ: ಪರಿಶಿಷ್ಟ ಜಾತಿ ಪ್ರಮಾಣಪತ್ರ ಇಲ್ಲದೇ ಎಲ್ಲ ಸೌಲಭ್ಯಗಳಿಂದ ವಂಚಿತಳಾಗಿದ್ದ ರೂಪಾಲಿ ರಾಜೇಂದ್ರ ಬೋರ್ಕರ್ ಎಂಬ ವಿದ್ಯಾರ್ಥಿನಿಗೆ ದುರ್ಗಾದೇವಿ ಹಿಂದೂ ಚಾಮಗಾರ ಜಾತಿ ಜಿಲ್ಲಾ ಸೇವಾ ಸಂಘ ನಿರಂತರ ಪ್ರಯತ್ನದ ಮೂಲಕ ಪ್ರಮಾಣಪತ್ರ ದೊರಕಿಸಿಕೊಟ್ಟು ವಿದ್ಯಾರ್ಥಿನಿಯ ಭವಿಷ್ಯಕ್ಕೆ ಬೆಳಕಾಗಿದೆ.
ನಗರದ ಕೋಡಿಬಾಗದ ಪ್ರೀತಿ ರಾಜೇಂದ್ರ ಬೋರ್ಕರ್ ಅವರನ್ನು ಗೋವಾಕ್ಕೆ ವಿವಾಹ ಮಾಡಿಕೊಡಲಾಗಿತ್ತು. ನಂತರ ಕೌಟುಂಬಿಕ ಕಾರಣದಿಂದ ಪ್ರೀತಿ ಬೋರ್ಕರ್ ಮಗಳೊಂದಿಗೆ ಕಾರವಾರಕ್ಕೆ ಬಂದು ನೆಲೆಸಿದರು. ಮಗಳು ರೂಪಾಲಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಮಾಡಿಸಲು ಅಗತ್ಯ ದಾಖಲೆಗಳನ್ನು ತಂದೆ ರಾಜೇಂದ್ರ ಬೋರ್ಕರ್ ಅವರಿಂದ ಪಡೆಯಲು ಸಾಧ್ಯವಾಗದೇ ಇರುವುದರಿಂದ ರೂಪಾಲಿ 1 ರಿಂದ 9ನೇ ತರಗತಿ ತನಕ ಎಲ್ಲ ಸೌಲಭ್ಯಗಳಿಂದ ವಂಚಿತಳಾಗಿದ್ದಳು.ಈ ನಡುವೆ ಪ್ರೀತಿ ಬೋರ್ಕರ್ ಅನಾರೋಗ್ಯಕ್ಕೊಳಗಾದರು. ನಂತರ ಪ್ರೀತಿ ಬೋರ್ಕರ್ ದುರ್ಗಾದೇವಿ ಹಿಂದೂ ಚಾಮಗಾರ ಜಾತಿ ಜಿಲ್ಲಾ ಸೇವಾ ಸಂಘದ ಕಾರ್ಯದರ್ಶಿ ಸಂತೋಷ ಕುಡಾಳ್ಕರ್ ಹಾಗೂ ಅಧ್ಯಕ್ಷ ಲಕ್ಷ್ಮೇಶ್ವರ ಬೋ ರ್ಕರ್ ಅವರನ್ನು ಸಂಪರ್ಕಿಸಿ ಜಾತಿ ಪ್ರಮಾಣಪತ್ರ ದೊರಕಿಸಿಕೊಡುವಂತೆ ವಿನಂತಿಸಿದರು.ವಿದ್ಯಾರ್ಥಿನಿ ಎಲ್ಲ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಮನಗಂಡ ಸಂಘದ ಕಾರ್ಯದರ್ಶಿ ಸಂತೋಷ ಕುಡಾಳ್ಕರ್ ಹಾಗೂ ಅಧ್ಯಕ್ಷ ಲಕ್ಷ್ಮೇಶ್ವರ ಬೋರ್ಕರ್ ಗೋವಾ ಸರ್ಕಾರದ ಅಧಿಕಾರಿಗಳೊಂದಿಗೆ ಸಂಪರ್ಕ ಆರಂಭಿಸಿದರು. ಗೋವಾದ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಗೋವಾ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೆ ಮನವಿ ಮಾಡಿದರು. ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಮೂರು ತಿಂಗಳ ಕಾಲ ದೂರವಾಣಿ ಕರೆ ಮಾಡಿ ಕೊನೆಗೂ ಪರಿಶಿಷ್ಟ ಪ್ರಮಾಣ ದೊರಕಿಸಿಕೊಡುವಲ್ಲಿ ಸಫಲರಾದರು.
ತಾವು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೂ ಮಗಳಿಗೆ ಜಾತಿ ಪ್ರಮಾಣ ಪತ್ರ ದೊರಕಿಸಿಕೊಟ್ಟ ಸಂಘದ ಕಾರ್ಯದರ್ಶಿ ಸಂತೋಷ ಕುಡಾಳ್ಕರ್ ಹಾಗೂ ಅಧ್ಯಕ್ಷ ಲಕ್ಷ್ಮೇಶ್ವರ ಬೋರ್ಕರ್ ಅವರಿಗೆ ಪ್ರೀತಿ ಬೋರ್ಕರ್ ಕೃತಜ್ಞತೆ ಸಲ್ಲಿಸಿದ್ದಾರೆ.ಸಂಘವು ಕ್ರಿಯಾಶೀಲ ಚಟುವಟಿಕೆಯಲ್ಲಿ ಚಟುವಟಿಕೆಯಲ್ಲಿ ತೊಡಗಿಕೊಂಡು ಸಮಾಜಕ್ಕೆ ನೆರವಾಗುತ್ತಿರುವುದನ್ನು ಹಲವರು ಪ್ರಶಂಸಿಸಿದ್ದಾರೆ.