ಕೊನೆಗೂ ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯ ಮಾರ್ಗ ವರೆಗೆ ವಿಸ್ತರಣೆ

| Published : Apr 11 2025, 12:33 AM IST

ಕೊನೆಗೂ ಮಂಗಳೂರು-ಕಬಕ ಪುತ್ತೂರು ರೈಲು ಸುಬ್ರಹ್ಮಣ್ಯ ಮಾರ್ಗ ವರೆಗೆ ವಿಸ್ತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೀಟರ್‌ಗೇಜ್‌ ವೇಳೆ ಮಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗ ವರೆಗೆ ಪ್ಯಾಸೆಂಜರ್‌ ಓಡಾಟ ಇತ್ತು. ಬ್ರಾಡ್‌ಗೇಜ್‌ ವೇಳೆ ಪ್ಯಾಸೆಂಜರ್‌ ಓಡಾಟ ಸ್ಥಗಿತಗೊಂಡಿತ್ತು. ಬಳಿಕ ಮಂಗಳೂರಿನಿಂದ ಕಬಕ ಪುತ್ತೂರು ವರೆಗೆ ಮಾತ್ರ ಪ್ಯಾಸೆಂಜರ್‌ ಓಡಾಟ ನಡೆಸುತ್ತಿತ್ತು. ಸುಮಾರು 18 ವರ್ಷ ಬಳಿಕ ಈಗ ಮತ್ತೆ ಸುಬ್ರಹ್ಮಣ್ಯ ಮಾರ್ಗ ವರೆಗೆ ಪ್ಯಾಸೆಂಜರ್‌ ರೈಲು ಓಡಾಟ ಪುನಾರಂಭಿಸಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಯಾತ್ರಾರ್ಥಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಬಹುನಿರೀಕ್ಷಿತ ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್‌ ರೈಲು ಸಂಚಾರ ಏಪ್ರಿಲ್‌ 12 ರಿಂದ ಸುಬ್ರಹ್ಮಣ್ಯ ಮಾರ್ಗ ವರೆಗೆ ವಿಸ್ತರಣೆಗೊಳ್ಳಲಿದೆ.

ಮೀಟರ್‌ಗೇಜ್‌ ವೇಳೆ ಮಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗ ವರೆಗೆ ಪ್ಯಾಸೆಂಜರ್‌ ಓಡಾಟ ಇತ್ತು. ಬ್ರಾಡ್‌ಗೇಜ್‌ ವೇಳೆ ಪ್ಯಾಸೆಂಜರ್‌ ಓಡಾಟ ಸ್ಥಗಿತಗೊಂಡಿತ್ತು. ಬಳಿಕ ಮಂಗಳೂರಿನಿಂದ ಕಬಕ ಪುತ್ತೂರು ವರೆಗೆ ಮಾತ್ರ ಪ್ಯಾಸೆಂಜರ್‌ ಓಡಾಟ ನಡೆಸುತ್ತಿತ್ತು. ಸುಮಾರು 18 ವರ್ಷ ಬಳಿಕ ಈಗ ಮತ್ತೆ ಸುಬ್ರಹ್ಮಣ್ಯ ಮಾರ್ಗ ವರೆಗೆ ಪ್ಯಾಸೆಂಜರ್‌ ರೈಲು ಓಡಾಟ ಪುನಾರಂಭಿಸಲಿದೆ.

ಏ. 12 ರಂದು ಸಂಜೆ 4 ಗಂಟೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಅವರು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಸುಬ್ರಹ್ಮಣ್ಯ ಮಾರ್ಗ ವರೆಗಿನ ವಿಸ್ತರಣೆಯ ಈ ವಿಶೇಷ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಸಂದರ್ಭ ಜಿಲ್ಲೆಯ ಜನಪ್ರತಿನಿಧಿಗಳು, ರೈಲ್ವೆ ವಿಭಾಗಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ದ.ಕ. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ರೈಲು ವಿಸ್ತರಣೆಯಿಂದ ಕುಕ್ಕೆ ಸುಬ್ರಹ್ಮಣ್ಯ ಯಾತ್ರಾರ್ಥಿಗಳಿಗೆ ಮಾತ್ರವಲ್ಲ ಮಂಗಳೂರಿಗೆ ತೆರಳುವ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಸಹಕಾರಿಯಾಗಲಿದೆ. ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ ಎಂದರು.

13ರಂದು ಕಬಡ್ಡಿ ಮ್ಯಾಟ್‌ ವಿತರಣೆ:

ಕ್ರೀಡಾ ಭಾರತಿ ದ.ಕ. ಜಿಲ್ಲೆ ಮತ್ತು ದ.ಕ.ಜಿಲ್ಲಾ ಅಮೆಚೂರ್‌ ಕಬಡ್ಡಿ ಅಸೋಸಿಯೇಷನ್‌ ಸಹಭಾಗಿತ್ವದಲ್ಲಿ ಹನುಮಾನ್‌ ಜಯಂತಿ ಪ್ರಯುಕ್ತ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಎನ್‌ಎಂಪಿಎ ಇದರ ಸಿಎಸ್ಆರ್‌ ನಿಧಿಯಡಿ ಕೊಡಮಾಡುವ ಕಬಡ್ಡಿ ಮ್ಯಾಟ್‌ ವಿತರಣಾ ಸಮಾರಂಭ ಏ.13ರಂದು ಬೆಳಗ್ಗೆ 9.30ಕ್ಕೆ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿದೆ. ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ, ಎನ್‌ಎಂಪಿಎ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು. ..................

ಮಂಗಳೂರು-ಸುಬ್ರಹ್ಮಣ್ಯ ಮಾರ್ಗ ರೈಲು ವೇಳಾಪಟ್ಟಿ

ಪ್ರಸ್ತಾವಿತ ಮಂಗಳೂರು-ಕಬಕ ಪುತ್ತೂರು-ಸುಬ್ರಹ್ಮಣ್ಯ ಮಾರ್ಗ ನಡುವಿನ ಪ್ಯಾಸೆಂಜರ್‌ ರೈಲಿನ ವೇಳಾಪಟ್ಟಿ ಇಂತಿದೆ. ರೈಲು ನಂಬರ್‌ 56625 ಮಂಗಳೂರು ಸೆಂಟ್ರಲ್‌ನಿಂದ ನಸುಕಿನ 4 ಗಂಟೆಗೆ ಹೊರಟು 5.18 ಕಬಕ ಪುತ್ತೂರು, 6.30ಕ್ಕೆ ಸುಬ್ರಹ್ಮಣ್ಯ ಮಾರ್ಗ ತಲುಪಲಿದೆ. ಅಲ್ಲಿಂದ ನಂಬರ್‌ 56626 ರೈಲು 7 ಗಂಟೆಗೆ ಹೊರಟು 7.48ಕ್ಕೆ ಕಬಕ ಪುತ್ತೂರು, 9.30ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ. ರೈಲು ನಂಬರ್‌ 56627 ಸಂಜೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ರಾತ್ರಿ 7.05ಕ್ಕೆ ಕಬಕ ಪುತ್ತೂರು, 8.10ಕ್ಕೆ ಸುಬ್ರಹ್ಮಣ್ಯ ಮಾರ್ಗ ತಲುಪಲಿದೆ. ಅಲ್ಲಿಂದ ನಂಬರ್‌ 56628 ರೈಲು ರಾತ್ರಿ 8.40ಕ್ಕೆ ಹೊರಟು 9.28 ಕಬಕ ಪುತ್ತೂರು, 11.10ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ. ಈ ಪ್ಯಾಸೆಂಜರ್‌ ರೈಲಿಗೆ ಬಜಕೆರೆ, ಕೋಡಿಂಬಾಳ, ಎಡಮಂಗಲ, ಕಾಣಿಯೂರು, ನರಿಮೊಗರು, ಕಬಕ ಪುತ್ತೂರು, ನೇರಳಕಟ್ಟೆ, ಬಂಟ್ವಾಳ ಮತ್ತು ಮಂಗಳೂರು ಜಂಕ್ಷನ್‌ಗಳಲ್ಲಿ ನಿಲುಗಡೆ ಇರಲಿದೆ.