ಸಾರಾಂಶ
ಪಟ್ಟಣದಿಂದ ಬೂದಿಕೋಟೆ, ಮಾಲೂರು ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಬೂದಿಕೋಟೆ ವೃತ್ತದ ಬಳಿ ಈ ಹಿಂದೆ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಅಳವಡಿಸಿದ್ದ ಗೇಟ್ ಐದು ವರ್ಷಗಳ ಹಿಂದೆ ಬಂದ್ ಮಾಡಿದ್ದರಿಂದ ವಾಹನಸವಾರರು ಒಂದು ಕಿ.ಮೀ ಸುತ್ತಿಕೊಂಡು ಸಂಚರಿಸಬೇಕಿತ್ತು
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕ್ಷೇತ್ರದ ಜನರ ಬಹುವರ್ಷಗಳಿಂದ ಎದುರು ನೋಡುತ್ತಿದ್ದ ಬೂದಿಕೋಟೆ ವೃತ್ತದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಫೆ.26ರಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಗುದ್ದಲಿ ಪೂಜೆ ನೆರೆವೇರಿಸಲಿದ್ದು, ಈ ಭಾಗದ ಜನತೆಯ ಬಹುದಿನಗಳ ಕನಸು ನನಸಾಗಲಿದೆ.ಪಟ್ಟಣದಿಂದ ಬೂದಿಕೋಟೆ, ಮಾಲೂರು ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಬೂದಿಕೋಟೆ ವೃತ್ತದ ಬಳಿ ಈ ಹಿಂದೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಅಳವಡಿಸಿದ್ದರು. ಆದರೆ ಐದು ವರ್ಷಗಳ ಹಿಂದೆ ಗೇಟ್ ಬಂದ್ ಮಾಡಿ ರೈಲ್ವೆ ಇಲಾಖೆ ಒಂದು ಕಿ.ಮೀ ಸುತ್ತಿಕೊಂಡು ಸಂಚರಿಸುವಂತೆ ಪರ್ಯಾಯ ವ್ಯವಸ್ಥೆ ಮಾಡಿದೆ. ಇದರಿಂದ ವಾಹನಗಳ ಸಂಚಾರಕಕ್ಕೆ ನಿತ್ಯ ಕಿರಿಕಿರಿ ಉಂಟಾಗಿ ಇಲಾಖೆ ಹಾಗೂ ಜನಪ್ರತಿನಿಧಿಗಳನ್ನು ಶಪಿಸಿಕೊಂಡೇ ಸಂಚರಿಸುತ್ತಿದ್ದಾರೆ.ಜನತೆಯ ಬಹುದಿನಗಳ ಬೇಡಿಕೆ
ಅಲ್ಲದೆ ಈ ಹಿಂದೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಸಂಸದ ಎಸ್.ಮುನಿಸ್ವಾಮಿ ಇಬ್ಬರಲ್ಲಿಯೂ ಸಾರ್ವಜನಿಕರು ಮನವಿ ಮಾಡಿ ಹಲವು ಬಾರಿ ಸಂಘ ಸಂಸ್ಥೆಗಳು ಪ್ರತಿಭಟಿಸಿ ಎಂದಿನಂತೆ ಮುಚ್ಚಿರುವ ಗೇಟ್ ತೆರೆದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಸಂಸದ ಎಸ್.ಮುನಿಸ್ವಾಮಿ ಅನೇಕ ಬಾರಿ ಪಟ್ಟಣಕ್ಕೆ ಬಂದಾಗೆಲ್ಲಾ ಜನರು ಬೂದಿಕೋಟೆ ವೃತ್ತದ ಬಳಿ ಹಳೇ ಪದ್ದತಿಯಂತೆ ಮುಚ್ಚಿರುವ ಗೇಟ್ ತೆರೆಯಿರಿ ಇಲ್ಲವೆ ಅಲ್ಲಿ ಸುಗಮ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಿ ಎಂದು ಬೇಡಿಕೆ ಇಟ್ಟಿದ್ದರು.ಅದರಂತೆ ಸಂಸದ ಎಸ್.ಮುನಿಸ್ವಾಮಿ ರೈಲ್ವೆ ಸಚಿವರ ಬಳಿ ಪ್ರಸ್ತಾಪ ಸಲ್ಲಿಸಿ ವಾಹನ ದಟ್ಟಣೆಯಿರುವುದರಿಂದ ನಿತ್ಯ ರೈಲು ಬಂದು ಹೋಗುವಾಗ ಸಾರ್ವಜನಿಕರಿಗೆ ಹಾಗೂ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಅಲ್ಲದೆ ಆ್ಯಂಬುಲೆನ್ಸ್ ಬಂದರೂ ರೈಲು ಹೋಗುವವರೆಗೂ ಕಾಯಬೇಕಾಗಿದೆ ಆದ್ದರಿಂದ ಅಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಮನವರಿಕೆ ಮಾಡಿದ್ದರು.
₹30 ಕೋಟಿ ವೆಚ್ಚದ ಯೋಜನೆಇದಕ್ಕೆ ಸ್ಪಂದಿಸಿದ ರೈಲ್ವ ಸಚಿವರು ೩೦ಕೋಟಿ ರು.ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸಮ್ಮತಿಸಿದೆ. ಅದರಂತೆ ಫೆ.೨೬ರ ಸೋಮವಾರ ಪ್ರಧಾನಿ ಮೋದಿ ಅವರು ಪಟ್ಟಣದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಇತರೆ ಕಾಮಗಾರಿಗಳಿಗೆ ಒಮ್ಮೆಲೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಈ ಯೋಜನೆ ಅನುಷ್ಟಾನಕ್ಕೆ ಬಂದರೆ ಈ ಮಾರ್ಗದಲ್ಲಿ ಸುಗಮವಾಗಿ ವಾಹನಗಳು ಸಂಚರಿಸಲು ಅನುಕೂಲವಾಗಲಿದೆ, ಈಗಾಗಲೇ ಕಾಮಗಾರಿ ಆರಂಭಿಸಲು ಇಲಾಖೆ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದೆ. ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ದೆಹಲಿಯಿಂದ ಚಾಲನೆ ನೀಡುವ ಕಾರ‍್ಯಕ್ರಮವನ್ನು ಪಟ್ಟಣದಲ್ಲಿ ಸಾರ್ವಜನಿಕರು ನೋಡಿ ಅವರ ಭಾಷಣವನ್ನು ವೀಕ್ಷಿಸಲು ಇಲಾಖೆ ರೈಲ್ವೆ ನಿಲ್ದಾಣದ ಬಳಿ ದೊಡ್ಡ ಪರದೆ ಅಳವಡಿಸಿದೆ.ರಾಜ್ಯದಲ್ಲೇ 2ನೇ ದೊಡ್ಡ ನಿಲ್ದಾಣ
ಪಟ್ಟಣದ ರೈಲು ನಿಲ್ದಾಣ ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಹಾಗೂ ಇಲಾಖೆಗೆ ಹೆಚ್ಚಿನ ಆದಾಯ ಬರುವ ನಿಲ್ದಾಣವಾಗಿದ್ದು, ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಕೇಂದ್ರ ಸರ್ಕಾರ ಈಗಾಗಲೇ ಅನೇಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕಾಮಗಾರಿಗಳನ್ನು ಕೈಗೊಂಡಿದೆ.