ಸಾರಾಂಶ
ವಿಜಯಪುರ : ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಮಣ್ಣಿನ ಮೂರ್ತಿಗಳನ್ನು ಹಾಗೂ ಫೈಬರ್ ಗಣೇಶ ಮೂರ್ತಿಗಳನ್ನು ಸ್ಥಾಪಿಸಿದರೇ ಆರ್ಥಿಕ ಸಹಾಯ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ಘೋಷಣೆ ಮಾಡಿದರು.
ನಗರದ ಸಿದ್ದೇಶ್ವರ ದೇವಸ್ಥಾನ ಆವರಣಲ್ಲಿರುವ ಶಿವಾನುಭವ ಮಂಟಪದಲ್ಲಿ ನಡೆದ ಸ್ವಾಮಿ ವಿವೇಕಾನಂದ ಸೇನೆ ಗಜಾನನ ಮಹಾಮಂಡಳ-2024 ಸಭೆಯಲ್ಲಿ ಮಾತನಾಡಿದ ಅವರು, ಪರಿಸರ ರಕ್ಷಣೆಯ ಸಂಕಲ್ಪದೊಂದಿಗೆ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಫೈಬರ್ ಹಾಗೂ ಮಣ್ಣಿನ ಮೂರ್ತಿಗಳ ಸ್ಥಾಪನೆಗೆ ನಗರದಲ್ಲಿರುವ 500ಕ್ಕೂ ಹೆಚ್ಚು ಗಜಾನನ ಮಂಡಳಿಗಳು ಮುಂದಾದರೇ ನಗರ ಶಾಸಕರು ಹಾಗೂ ತಂದೆಯವರಾದ ಬಸನಗೌಡ ಪಾಟೀಲ ಯತ್ನಾಳ ಅವರು ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದು, ಹೀಗಾಗಿ ಪರಿಸರ ಸಂರಕ್ಷಣೆಗೆ ಎಲ್ಲ ಮಂಡಳಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ್ ಅಣ್ಣಿಗೇರಿ ಮಾತನಾಡಿ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ನಿರ್ದೇಶನದಂತೆ ನಗರದಲ್ಲಿರುವ ಪ್ರತಿ ಗಜಾನನ ಮಂಡಳಿಗಳಿಗೆ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಪುಸ್ತಕ ವಿತರಿಸಲು ನಿರ್ಧರಿಸಲಾಗಿದ್ದು, ಗಜಾನನ ಮಹಾಮಂಡಳ ವೇದಿಕೆಗೆ ಉಕ್ಕಿನ ಮನುಷ್ಯ ಸರ್ಧಾರ್ ವಲ್ಲಭಬಾಯಿ ಪಟೇಲ್ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ.
ಪರಿಸರ ಸಂರಕ್ಷಣೆಗಾಗಿ ನಗರ ಪ್ರದೇಶದಲ್ಲಿ ಸಸಿ ನೆಟ್ಟು ಗಿಡ ಬೆಳಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.ಪ್ರತಿ ಗಜಾನನ ಮಂಡಳಿಗಳ ವೇದಿಕೆಯಲ್ಲಿ ನಡೆದಾಡುವ ದೇವರಾಗಿದ್ದ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಭಾವಚಿತ್ರ ಇಡಲು ಕೋರಿ, ಶಾಂತಿ ಸೌಹಾರ್ದತೆಯಿಂದ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸಲು ಕೋರಿದರು.ಡಿಎಸ್ಪಿ ಬಸವರಾಜ್ ಎಲಿಗಾರ ಮಾತನಾಡಿ, ಗಜಾನನ ಮಂಡಳಿಗಳು ಮೆರವಣಿಗೆಯ ಸಂದರ್ಭದಲ್ಲಿ ಭಕ್ತಿ ಗೀತೆಗಳನ್ನು ಹಾಕುವುದರೊಂದಿಗೆ ನಮ್ಮ ಸಂಸ್ಕೃತಿ ಉಳಿಸಬೇಕು. ಸಾರ್ವಜನಿಕರು, ವಯೋವೃದ್ಧರಿಗೆ ತೊಂದರೆಯಾಗದಂತೆ ಮತ್ತು ಶಬ್ದಮಾಲಿನ್ಯದಿಂದ ಉಂಟಾಗುವ ಹಾನಿ ತಡೆಗಟ್ಟಲು ಗಜಾನನ ಮಂಡಳಿಗಳು ಪೊಲೀಸ್ ಇಲಾಖೆ ಜತೆ ಕೈಜೋಡಿಸಬೇಕು ಎಂದರು.
ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ್, ನಿರ್ದೇಶಕರಾದ ಸಾಯಬಣ್ಣ ಬೋವಿ, ಸದಾಶಿವ ಗುಡ್ಡೋಡಗಿ, ಸಿದ್ದೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ವಿಡಿಎ ಮಾಜಿ ಅಧ್ಯಕ್ಷ ಪರಶುರಾಮ ರಜಪೂತ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗೀಮಠ, ಎಂ.ಎಸ್.ಕರಡಿ, ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ಕುಮಾರ ಗಡಗಿ, ವಿಠ್ಠಲ ಹೊಸಪೇಟ, ಯುವ ಮುಖಂಡರಾದ ಸಂತೋಷ ಪಾಟೀಲ, ಸಚಿನ ಕುಮಸಿ, ಗಿರೀಶ ಬಿರಾದಾರ, ಚಂದ್ರು ಚೌದರಿ, ಸಂತೋಷ ತಳಕೇರಿ, ಪ್ರಕಾಶ ಚವ್ಹಾಣ, ಹನುಮಂತ ಚಿಂಚಲಿ, ದತ್ತಾ ಗೋಲಾಂಡೆ ಸೇರಿದಂತೆ ನಗರದ ಸಮಸ್ತ ಗಜಾನನ ಮಂಡಳಿಗಳ ಪದಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು, ಅಭಿಮಾನಿಗಳು ಉಪಸ್ಥಿತರಿದ್ದರು.
ಪದಾಧಿಕಾರಿಗಳ ನೇಮಕ:
ಸ್ವಾಮಿ ವಿವೇಕಾನಂದ ಸೇನೆ ಗಜಾನನ ಮಹಾಮಂಡಳ-2024ರ ಅಧ್ಯಕ್ಷರನ್ನಾಗಿ ಸಂದೀಪ ಪಂಗಡವಾಲೆ, ಉಪಾಧ್ಯಕ್ಷರನ್ನಾಗಿ ಪ್ರಶಾಂತ ದೇಸಾಯಿ, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಪರಶುರಾಮ ಕೊಂಚಿಕೋರವೇರ, ಕರಮವೀರಸಿಂಗ್ ಸಂಧು, ಸಚಿನ ಬಡಾವಣೆ, ಕಾರ್ಯದರ್ಶಿಗಳನ್ನಾಗಿ ಸಂತೋಷ ತೆಲಸಂಗ, ರವಿ ಅಗಸರ, ಶಿವು ಭಜಂತ್ರಿ, ಮನೋಜ ಸುರಪುರ ಅವರನ್ನು ನೇಮಕ ಮಾಡಲಾಯಿತು.
₹21 ಸಾವಿರ ಬಹುಮಾನ:
ಅತ್ಯುತ್ತಮ ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹಕ್ಕೆ ಹಿಂದೂ ಸಾಂಪ್ರದಾಯಿಕ ವಾದ್ಯಗಳ ಭವ್ಯ ಮೆರವಣಿಗೆಗೆ ಹಾಗೂ ಉತ್ತಮ ಅಲಂಕಾರ ಮಾಡಿದ ಗಣೇಶ ಮಂಡಳಿಗೆ ತಲಾ ₹21 ಸಾವಿರ ಬಹುಮಾನ ನೀಡಲು ನಿರ್ಣಯಿಸಲಾಯಿತು.
ಪರಿಸರ ರಕ್ಷಣೆಯ ಸಂಕಲ್ಪದೊಂದಿಗೆ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಫೈಬರ್ ಹಾಗೂ ಮಣ್ಣಿನ ಮೂರ್ತಿಗಳ ಸ್ಥಾಪನೆಗೆ ನಗರದಲ್ಲಿರುವ 500ಕ್ಕೂ ಹೆಚ್ಚು ಗಜಾನನ ಮಂಡಳಿಗಳು ಮುಂದಾದರೇ ನಗರ ಶಾಸಕರು ಹಾಗೂ ತಂದೆಯವರಾದ ಬಸನಗೌಡ ಪಾಟೀಲ ಯತ್ನಾಳ ಅವರು ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದು, ಹೀಗಾಗಿ ಪರಿಸರ ಸಂರಕ್ಷಣೆಗೆ ಎಲ್ಲ ಮಂಡಳಿಗಳು ಕೈಜೋಡಿಸಬೇಕು.
-ರಾಮನಗೌಡ ಪಾಟೀಲ ಯತ್ನಾಳ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ.ನಿರ್ದೇಶಕರು.