ಮಧ್ಯಸ್ಥಿಕೆ ಕಂಪನಿಗಳಿಂದ ರೈತರಿಗೆ ಆರ್ಥಿಕ ನೆರವು ಸಾಧ್ಯ

| Published : Sep 29 2024, 01:49 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಕೃಷಿ ವ್ಯವಹಾರಗಳಿಗೆ ಸಂಬಂಧಿತ ಹಣಕಾಸು ಸೇವೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕನಸನ್ನು ನನಸು ಮಾಡಲು ರೈತರು ಸೇರಿ ಕಟ್ಟಿರುವ ಕಂಪನಿ ಭೂಮಿಕೆಯಾಗಿದೆ ಎಂದು ಜಿಲ್ಲೆಯ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ನೇತಾಜಿ.ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಕೃಷಿ ವ್ಯವಹಾರಗಳಿಗೆ ಸಂಬಂಧಿತ ಹಣಕಾಸು ಸೇವೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕನಸನ್ನು ನನಸು ಮಾಡಲು ರೈತರು ಸೇರಿ ಕಟ್ಟಿರುವ ಕಂಪನಿ ಭೂಮಿಕೆಯಾಗಿದೆ ಎಂದು ಜಿಲ್ಲೆಯ ಅಗ್ರಣೀಯ ಬ್ಯಾಂಕ್‌ ವ್ಯವಸ್ಥಾಪಕ ನೇತಾಜಿ.ಡಿ ಹೇಳಿದರು.

ನಗರದ ಹೊರಭಾಗದ ಶ್ರೀ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಿಯಮಿತದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸದಸ್ಯ ರೈತರಿಗೆ ಕೃಷಿ ಮತ್ತು ಉಪ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಸಾಲದ ನೆರವು, ಸರ್ಕಾರಿ ಯೋಜನೆಗಳ ಸಬ್ಸಿಡಿ ಪ್ರಯೋಜನ ದೊರಕಿಸಿಕೊಡುವ ಜೊತೆಗೆ ಸಾಲ ಮರು ಪಾವತಿಯನ್ನು ಖಾತ್ರಿಪಡಿಸಲು ಬೇಕಾದ ಮಧ್ಯಸ್ಥಿಕೆಯನ್ನು ಉತ್ಪಾದಕ ಕಂಪನಿಗಳು ತೆಗೆದುಕೊಂಡಲ್ಲಿ ಸಕಾಲದಲ್ಲಿ ರೈತರಿಗೆ ಆರ್ಥಿಕ ನೆರವು ಕಲ್ಪಿಸಿಕೊಡಲು ಸಾಧ್ಯವಾಗಲಿದೆ ಎಂದರು.

ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಕುಕ್ಕುಟ ವಿಭಾಗದ ಸಹಾಯಕ ನಿರ್ದೇಶಕಿ ಡಾ.ಪದ್ಮಾವತಿ ದೊಡಮನಿ ಮಾತನಾಡಿ, ಕೃಷಿಯಲ್ಲಿ ಹೆಚ್ಚುತ್ತಿರುವ ಚಿಕ್ಕ ಹಿಡುವಳಿಗಳು, ಬದಲಾಗುತ್ತಿರುವ ಕೃಷಿ ಆದ್ಯತೆಗಳು ಹಾಗೂ ಮರೆಯಾಗುತ್ತಿರುವ ಸಮಗ್ರ ಕೃಷಿ ಪದ್ಧತಿಯಿಂದ ಉಂಟಾದ ವಿಷಮತೆ ತೊಡೆದು ಹಾಕಲು ಸಾಮೂಹಿಕ ಕೃಷಿಯೊಂದೆ ಪರಿಹಾರ. ಈ ಕಾಲಘಟ್ಟದಲ್ಲಿ ರೈತರೇ ಕಟ್ಟಿದ ಕಂಪನಿ ರೈತರ ಪಾಲಿನ ಅಕ್ಷಯ ಪಾತ್ರೆಯಾಗಬೇಕೆಂದು ಎಂದು ಆಶಿಸಿದರು.

ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಸದಸ್ಯ ರೈತರಿಗೆ ಸುಸ್ಥಿರ ಲಾಭ ತಂದು ಕೊಡುವ ವಿಶೇಷ ವ್ಯವಹಾರಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಈ ಮೂಲಕ ಉತ್ಪಾದನಾ ತಾಂತ್ರಿಕತೆಗಳಿಂದ ಹಿಡಿದು ಸ್ವಂತ ಬ್ರ್ಯಾಂಡ್ ಹೆಸರಲ್ಲಿ ಮಾರುಕಟ್ಟೆ ಮಾಡುವ ಮಟ್ಟಕ್ಕೆ ಉತ್ಪಾದಕ ಕಂಪನಿಯನ್ನು ಬೆಳೆಸಲು ವ್ಯವಹಾರಿಕ ಯೋಜನೆ ಮತ್ತು ಅನುಷ್ಠಾನ ಬದ್ದತೆಯೊಂದಿಗೆ ಕೆಲಸ ಆರಂಭಿಸಿದ ದಾಸೋಹಿ ಕಂಪನಿ ಇತರರಿಗೆ ಮಾದರಿಯಾಗಲಿದೆ ಎಂದರು.

ಕೊರಟೆಗೆರೆ ಪರಿವರ್ತನಾ ಇಕೋ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶಿವಕುಮಾರ. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಹರೀಶ.ಕೆ, ಪ್ರೊ ಅಗ್ರೋ ಬಯೋಟೆಕ್ ಎಂ.ಡಿ ಎಸ್.ಆರ್.ಜಾಧವ, ಕಾಶೀಬಾಯಿ ರಾಂಪೂರ, ಬಿ.ಬಿ.ಪಾಟೀಲ ಮತ್ತು ವೇ.ಶರಣಯ್ಯ ಹಿರೇಮಠ ಮಾತನಾಡಿದರು. ಕಂಪನಿಯ ಸಂಸ್ಥಾಪಕ ಅರವಿಂದ ಕೊಪ್ಪ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಂಪನಿಯ ನೂತನ ನಿರ್ದೇಶಕ ಆನಂದ ದೇಸಾಯಿ(ಸೂಳಿಭಾವಿ), ಜಗದೀಶ ಪಂಪಣ್ಣವರ, ಸೋಮಲಿಂಗಪ್ಪ ಗಸ್ತಿಗಾರ, ಕಲ್ಲಣ್ಣ ಪ್ಯಾಟಿ, ಬಿ.ಜಿ.ಮಠ (ಆಕ್ಸಫರ್ಡ್‌), ಗೋಲಪ್ಪ ಗಂಗನಗೌಡ್ರ, ಶ್ರೀಶೈಲ ಮೇಟಿ, ಭೀಮಣ್ಣ ಮಳಗೌಡರ, ಬಸವರಾಜ ಕುಂಟೋಜಿ, ಸೋಮನಗೌಡ ಬಿರಾದಾರ, ಗುರಯ್ಯ ಮುದ್ದನೂರಮಠ ಹಾಜರಿದ್ದರು.

ವ್ಯವಸ್ಥಾಪಕ ನಿರ್ದೇಶಕಿ ರಶ್ಮಿ ಕೊಪ್ಪ ಸ್ವಾಗತಿಸಿದರು. ಶೇಖರಗೌಡ ಬಿರಾದಾರ ಮಾತನಾಡಿದರು. ಡಾ. ರಾಜಶೇಖರ ಹತ್ತರಸಂಗ ನಿರೂಪಿಸಿದರು. ಬಾಲಕೃಷ್ಣ ಗೌಡರ ವಂದಿಸಿದರು. ಕಂಪನಿ ಸಿಇಒ ಶಿವಪ್ಪ ಮತ್ತು ಪ್ರಗತಿಪರ ರೈತ ರಾಜೇಂದ್ರ ಬೋಸಲೆ ಸಂವಾದ ನಡೆಸಿಕೊಟ್ಟರು.

-----------

ಕೋಟ್‌

ಕೃಷಿಯಿಂದಲೇ ವಿಮುಕ್ತತರಾಗಬೇಕೆಂಬ ರೈತರಿಗೆ ನ್ಯಾಯಸಮ್ಮತ ಮತ್ತು ಪಾರದರ್ಶಕ ಬೆಲೆ ಪಡೆಯಬಹುದು ಎಂದು ರೈತ ಉತ್ಪಾದಕ ಕಂಪನಿಯಿಂದ ನಿರೂಪಿಸಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಆಡು, ಕುರಿ ಮತ್ತು ಕೋಳಿ ಸಾಕಾಣಿಕೆ ಮಾಡಲು ರೈತರು ಮುಂದೆ ಬಂದಲ್ಲಿ ಮರು ಖರೀದಿ ಕರಾರಿನ ಮೇಲೆ ಎಲ್ಲ ರೀತಿಯ ನೆರವು ನೀಡಿ ಯೋಜನೆಯನ್ನು ಜಾರಿಗೊಳಿಸುತ್ತೇವೆ.

ಬಿ.ಆರ್.ಅಥಣಿ, ಪ್ಯೂಚರ್‌ ಗ್ರೀನ್ಸ್‌ ಸಂಸ್ಥಾಪಕ ಬಾಗಲಕೋಟೆ.