ಆರ್ಥಿಕ ಶಿಸ್ತು ಸಹಕಾರವಿದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಯಶಸ್ಸು ಮತ್ತು ದೀರ್ಘಕಾಲದ ಉಳಿವು ಸಾಧ್ಯ ಎಂದು ಅಕ್ಕಿಆಲೂರಿನ ಗುರು ಚೆನ್ನವೀರೇಶ್ವರ ವಿರಕ್ತ ಮಠದ ಶಿವಬಸವ ಸ್ವಾಮೀಜಿ ನುಡಿದರು.

ಹಾನಗಲ್ಲ:ಆರ್ಥಿಕ ಶಿಸ್ತು ಸಹಕಾರವಿದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಯಶಸ್ಸು ಮತ್ತು ದೀರ್ಘಕಾಲದ ಉಳಿವು ಸಾಧ್ಯ ಎಂದು ಅಕ್ಕಿಆಲೂರಿನ ಗುರು ಚೆನ್ನವೀರೇಶ್ವರ ವಿರಕ್ತ ಮಠದ ಶಿವಬಸವ ಸ್ವಾಮೀಜಿ ನುಡಿದರು.

ಹಾನಗಲ್ಲ ತಾಲೂಕಿನ ಅಕ್ಕಿಅಲೂರಿನ ಕುಮಾರೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ೭೩ನೇ ಸಹಕಾರಿ ಸಪ್ತಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿ, ಆಡಳಿತ ಮಂಡಳಿಯು ಸ್ವಹಿತಾಸಕ್ತಿಗಿಂತ ಸಂಸ್ಥೆಯ ಹಿತಾಸಕ್ತಿಗೆ ಆದ್ಯತೆ ನೀಡಿ, ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿದಾಗ ಮಾತ್ರ ಸಂಸ್ಥೆ ಲಾಭದತ್ತ ಸಾಗಲು ಸಾಧ್ಯ. ಒಬ್ಬ ವ್ಯಕ್ತಿ ಏಕಾಂಗಿಯಾಗಿ ಸಾಧಿಸಲಾಗದ್ದನ್ನು ಸಣ್ಣ ಸಣ್ಣ ಬಂಡವಾಳ ಹೂಡುವ ಅನೇಕ ಸದಸ್ಯರು ಒಟ್ಟಾಗಿ ಸೇರಿ ಸಾಧಿಸಬಹುದು. ಸಹಕಾರ ನಮ್ಮಲ್ಲಿದ್ದರೆ ಜೀವನದಲ್ಲಿ ಉತ್ತುಂಗಕ್ಕೇರಲೂ ಸಹ ಸಹಕಾರಿಯಾಗಲಿದೆ ಎಂದು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸಹಕಾರ ಹಾಲು ಮಹಾಮಂಡಳದ ನಿರ್ದೇಶಕ ಚಂದ್ರಪ್ಪ ಜಾಲಗಾರ, ಸಹಕಾರಿ ಕ್ಷೇತ್ರಕ್ಕೆ ಸರ್ಕಾರವನ್ನು ಆಳುವ ಶಕ್ತಿಯಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು. ಸರ್ವರೂ ಸಮಾನರೆಂಬ ಭಾವನೆಯಿದ್ದರೆ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸದಾನಂದ ಮೆಳ್ಳಿಹಳ್ಳಿ ಮಾತನಾಡಿ, ಹಾನಗಲ್ಲ ತಾಲೂಕಿಗೆ ಈ ವರ್ಷ ೩೦ ಕೋಟಿ ರು. ಮಾಧ್ಯಮಿಕ ಸಾಲ ಹಾಗೂ ಶೂನ್ಯ ಬಡ್ಡಿದರದಲ್ಲಿ ೭ ಕೋಟಿ ರು. ಸಾಲ ನೀಡಲಾಗಿದೆ. ಇನ್ನೊಂದು ವರ್ಷದಲ್ಲಿ ಹಾವೇರಿ ಜಿಲ್ಲೆಗೆ ಸೀಮಿತವಾಗಿ ಪ್ರತ್ಯೇಕ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಸ್ಥಾಪಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.

ಅಕ್ಕಿಆಲೂರು ಮುತ್ತಿನಕಂತಿಮಠ ಗುರು ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಷಣ್ಮುಖಪ್ಪ ಮುಚ್ಚಂಡಿ ಅಧ್ಯಕ್ಷತೆವಹಿಸಿದ್ದರು. ಸಹಕಾರ ಸಂಘಗಳ ಹಾವೇರಿ ಜಿಲ್ಲಾ ನಿರ್ದೇಶಕ ಮಧುಶ್ರೀನಿವಾಸ, ಸವಣೂರು ಉಪವಿಭಾಗದ ಸಹಾಯಕ ನಿಬಂಧಕ ಎಸ್.ಜಿ. ಸುಣಗಾರ, ನೇತಾಜಿ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಈಳಿಗೇರ, ಶಿಕ್ಷಕ ವಿಷ್ಣು ಪಟಗಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉತ್ತಮ ಸಹಕಾರಿ ಬಸವರಾಜ ಹೊನ್ನತ್ತಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ, ನಾರಾಯಣಪ್ಪ ಕಠಾರಿ, ವೀರಭದ್ರಪ್ಪ ಉಪ್ಪಿನ, ನಿಸ್ಸಿಮಗೌಡ ಪಾಟೀಲ, ಪಂಚಾಕ್ಷರಿ ಗೌಡ ಪಾಟೀಲ, ಮಹೇಶ ಬಣಕಾರ, ಉಮೇಶ ಅಂಗಡಿ, ಸುಜಾತಾ ಕೊಲ್ಲಾವರ, ಸಿದ್ರಾಮಪ್ಪ ವಿರುಪಣ್ಣನವರ, ಪದ್ಮಪ್ಪ ಮಂತಗಿ, ನಾಗಪ್ಪ ವಡೆಯರ, ಪುಟ್ಟಪ್ಪ ಸೊಪ್ಪಿನ ಉಪಸ್ಥಿತರಿದ್ದರು.

ಸವಿತಾ ಹಿರೇಮಠ ಸ್ವಾಗತಿಸಿದರು, ಕಿರಣ ಹೂಗಾರ ನಿರೂಪಿಸಿದರು. ಮಂಜುನಾಥ ಅರ್ಕಚಾರ ವಂದಿಸಿದರು.