ಕುಷ್ಟಗಿ: ಮದ್ಯಪಾನ ವ್ಯಕ್ತಿಯ ಆರೋಗ್ಯ,ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವಕರು ದುಶ್ಚಟ ದಾಸರಾಗದೇ ಶಿಕ್ಷಣ,ಉದ್ಯೋಗ ಹಾಗೂ ಸಮಾಜಮುಖಿ ಚಟುವಟಿಕೆಗಳತ್ತ ಗಮನಹರಿಸಬೇಕು ಎಂದು ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಪೊಲೀಸ್ ಇಲಾಖೆ ಹಾಗೂ ಪರಿವಾರ ಸಮೃದ್ಧಿ ಸೇವಾ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಮದ್ಯಪಾನದಿಂದ ಕುಟುಂಬಗಳಲ್ಲಿ ಕಲಹ,ಆರ್ಥಿಕ ಸಂಕಷ್ಟ ಹಾಗೂ ಅಪರಾಧ ಚಟುವಟಿಕೆ ಹೆಚ್ಚಾಗುತ್ತವೆ.ಆದ್ದರಿಂದ ಪ್ರತಿಯೊಬ್ಬರೂ ಮದ್ಯವರ್ಜನೆ ಸಂಕಲ್ಪ ಮಾಡಿ ಆರೋಗ್ಯಕರ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಅಭಿನವ ಕರಿಬಸವ ಶ್ರೀಗಳು ಮಾತನಾಡಿ, ಯುವಕರು ಭವಿಷ್ಯದ ಬಗ್ಗೆ ಆಲೋಚನೆ ಮಾಡದೆ ದುಶ್ಚಟದ ಕಡೆ ಗಮನ ಹರಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕುಡಿತದಿಂದ ಸಾಮಾಜಿಕ ಸಾಮರಸ್ಯ ಕುಟುಂಬ ನೆಮ್ಮದಿ ಹಾಳಾಗುತ್ತಿದ್ದು, ಯುವಕರು ಎಲ್ಲ ದುಶ್ಚಟ ಬಿಟ್ಟು ನಮ್ಮ ಜೋಳಿಗೆಗೆ ಹಾಕಿ ಉತ್ತಮ ಜೀವನ ನಡೆಸಬೇಕು ಎಂದರು.

ಸಿಪಿಐ ವಿಶ್ವನಾಥ ಹಿರೇಗೌಡರ ಮಾತನಾಡಿ, ಸಮಾಜದಲ್ಲಿ ಮದ್ಯಪಾನ ಸೇರಿದಂತೆ ವಿವಿಧ ದುಶ್ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಮದ್ಯವರ್ಜನ ಶಿಬಿರದ ಸದುಪಯೋಗ ಪಡೆದುಕೊಂಡು ದುಶ್ಚಟ ಬಿಟ್ಟು ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದರು.


ಸಮಾಜ ಸೇವಕ ನಾಗರಾಜ ಮೇಲಿನಮನಿ,ಸುಖರಾಜ ತಾಳಕೇರಿ ಮಾತನಾಡಿದರು.

ಈ ಸಂದರ್ಭದಲ್ಲಿ ಪರಿವಾರ ಸೇವಾ ಟ್ರಸ್ಟ್ ಹನಮಂತಪ್ಪ ಪೂಜಾರ, ಪಿಎಸೈ ಹನಮಂತಪ್ಪ ತಳವಾರ, ದೊಡ್ಡಯ್ಯ ಗದ್ದಡಕಿ ಹಾಗೂ ಪೊಲೀಸ್ ಸಿಬ್ಬಂದಿ ಮಾರುತಿ ಪೂಜಾರ ಸೇರಿದಂತೆ ಅನೇಕರು ಇದ್ದರು.