ಆರ್ಥಿಕ ಸಂಕಷ್ಟ; ಕೇಂದ್ರ ಸರ್ಕಾರಕ್ಕೆ ಸಚಿವ ಜಾರ್ಜ್‌ ಟೀಕೆ

| Published : Feb 11 2024, 01:54 AM IST

ಆರ್ಥಿಕ ಸಂಕಷ್ಟ; ಕೇಂದ್ರ ಸರ್ಕಾರಕ್ಕೆ ಸಚಿವ ಜಾರ್ಜ್‌ ಟೀಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌ ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ರಾಜ್ಯದ ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಆರೋಪಿಸಿದರು.

ತಾಲೂಕು ಆಡಳಿತ, ತಾಪಂ ಹಾಗೂ ನಗರಸಭೆ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ನೋಟುಗಳನ್ನು ಬದಲಾವಣೆ ಮಾಡಿತು. ಆದರೆ, ಇದರ ಉದ್ದೇಶ ಈಡೇರಲಿಲ್ಲ, ಜನರಿಗೆ ಆರ್ಥಿಕ ತೊಂದರೆಯಾಯಿತು. ಕೋವಿಡ್‌ ವಿದೇಶದಿಂದ ಪ್ರವೇಶ ಮಾಡಿ 2-3 ತಿಂಗಳ ನಂತರ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಯಂತ್ರಣ ಹೇರಿತು. ತಕ್ಷಣಕ್ಕೆ ಕ್ರಮ ಆಗಿದ್ದರೆ ಕೋವಿಡ್ ದೇಶದಲ್ಲಿ ಆ ಮಟ್ಟದಲ್ಲಿ ಹರಡುತ್ತಿರಲಿಲ್ಲ. ಜನರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಜಿಎಸ್‌ಟಿ ಜಾರಿ ಮಾಡಿದ ಸಂದರ್ಭದಲ್ಲಿ ಸ್ಲ್ಯಾಬ್‌ ನಿಂದಾಗಿ ಹೆಚ್ಚಿನ ಜನರಿಗೆ ತೊಂದರೆ ಯಾಯಿತು. ಹೀಗೆ ಸರ್ಕಾರದ ತಪ್ಪು ನಿರ್ಧಾರದಿಂದ ಬಡವರು ಮಾತ್ರವಲ್ಲ ಮಧ್ಯಮ ವರ್ಗ ಕೂಡ ಆರ್ಥಿಕವಾಗಿ ತುಂಬಾ ಕಷ್ಟದ ದಿನಗಳನ್ನು ಎದುರಿಸಿದ್ದರು.

ಜನರ ಕಷ್ಟ, ಆರ್ಥಿಕ ಪರಿಸ್ಥಿತಿ ನೋಡಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ 5 ಗ್ಯಾರಂಟಿ ಗಳನ್ನು ಘೋಷಿಸಿತು. ಇದರಿಂದ ಜನರ ಜೀವನ ಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿಸುವುದೇ ಉದ್ದೇಶ . ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಇದಕ್ಕೆ ರಾಜ್ಯಾದ್ಯಂತ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.

ಈ ಯೋಜನೆಗಳ ಬಗ್ಗೆ ಕೆಲವರು ಟೀಕೆ ಮಾಡುತ್ತಾರೆ, ಇವುಗಳು ಬಿಟ್ಟಿ ಯೋಜನೆಗಳೆಂದು ಕೊಂಕು ಮಾತನಾಡು ತ್ತಿದ್ದಾರೆ, ಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ತಪ್ಪೇ..? ಎಂದು ಪ್ರಶ್ನಿಸಿದ ಅವರು ಜೀವನ ಮಟ್ಟ ಸುಧಾರಣೆಗೆ ಇವು ಸಹಕಾರಿ. ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ಮೂಡಿಸಿದೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಜನಸಂಖ್ಯೆ 30 ಕೋಟಿ, ಆಹಾರ ಭದ್ರತೆಗೆ ಇಂದಿರಾಗಾಂಧಿಯವರು ಹಸಿರು ಕ್ರಾಂತಿ ಘೋಷಿಸಿದರು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಎಂಬುದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಆಶಯ. ಹಾಗಾಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರು. 20 ಅಂಶ ಕಾರ್ಯಕ್ರಮ ಜಾರಿಗೆ ತರಲಾಯಿತು ಎಂದರು.

ಸರ್ಕಾರ ಕೊಡುವ ಆರ್ಥಿಕ ಸಹಾಯ ಮತ್ತು ಯೋಜನೆಗಳಿಂದ ಉಳಿತಾಯವಾಗುವ ಹಣ ಇನ್ನೊಂದು ರೂಪದಲ್ಲಿ ಚಲಾವಣೆ ಆಗುವುದರಿಂದ ಸರ್ಕಾರಕ್ಕೆ ಮರಳಿ ಬರಲಿದೆ. ಅದ್ದರಿಂದ ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆ ಯಾಗುತ್ತಿಲ್ಲ, ಕೊಟ್ಟ ಮಾತಿನಂತೆ ರಾಜ್ಯ ಸರ್ಕಾರ ನಡೆದುಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸ ಬೇಕೆಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಬೆಲೆ ಏರಿಕೆಯಿಂದ ಆಗಿರುವ ತೊಂದರೆ ನಿವಾರಣೆಗೆ ಗೃಹಲಕ್ಷ್ಮಿ ಜಾರಿ ಮಾಡಲಾಗಿದೆ ಎಂದರು.

12ನೇ ಶತಮಾನದಲ್ಲಿ ಬಸವಣ್ಣನನ್ನು ಟೀಕೆ ಮಾಡಿದ್ದರು, ಈಗ ಸಿಎಂ ಸಿದ್ದರಾಮಯ್ಯ ಹಾಗೂ ನನ್ನನ್ನು ಟೀಕೆ ಮಾಡದೆ ಬಿಡ್ತಾರಾ, ಜನರ ತೆರಿಗೆ ಹಣದಲ್ಲಿ ಸೋರಿಕೆ ತಡೆದು ಅದರಲ್ಲಿ ವರ್ಷಕ್ಕೆ 95,000 ಕೋಟಿ ಬಡವರಿಗೆ ಈ ಗ್ಯಾರಂಟಿ ಯೋಜನೆ ಮೂಲಕ ಸರ್ಕಾರ ತಲುಪಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಬಂದು 8 ತಿಂಗಳಾಗಿದೆ. ಈ ಸರ್ಕಾರ ಏನು ಮಾಡಿದೆ ಎಂದು ನಮ್ಮ ಯೋಜನೆ ಜಾರಿ ಯಾಗಿರು ವುದನ್ನು ಸಹಿಸಿಕೊಳ್ಳದೆ ಪ್ರಶ್ನೆ ಮಾಡುತ್ತಿದ್ದಾರೆ. ಬಹಳ ವರ್ಷ ಅಧಿಕಾರದಲ್ಲಿದ್ದವರು ನೀರಿನಿಂದ ಹೊರಗೆ ತೆಗೆದ ಮೀನಿನಂತಾಗಿದ್ದಾರೆ, ಅವರಿಗೆ ಸಹಿಸಲು ಆಗುತ್ತಿಲ್ಲ ಎಂದರು.

ನುಡಿದಂತೆ ನಡೆದುಕೊಂಡಿದ್ದೇವೆ, ಅಭಿವೃದ್ಧಿ ಕಾರ್ಯಕ್ಕೂ ಮುಖ್ಯಮಂತ್ರಿ ಹಣ ಬಿಡುಗಡೆ ಮಾಡುತ್ತಿದ್ದಾರೆ, ಸರ್ಕಾರದ ಆರನೇ ಗ್ಯಾರಂಟಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಂಧಿಸಿದ್ದು, ಈ ವಿಚಾರ ಸರ್ಕಾರದ ಮಟ್ಟದಲ್ಲಿದೆ ಖಂಡಿತ ಆಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ , ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಜಿಲ್ಲಾ ಎಸ್ಪಿ ಡಾ. ವಿಕ್ರಂ ಅಮಟೆ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಹಾಗೂ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಿಲ್ಜೀತ್‌ಕುಮಾರ್ ಉಪಸ್ಥಿತರಿದ್ದರು.

---- ಬಾಕ್ಸ್ -----

ಸಿಹಿ ತಿನಿಸಿದ ಫಲಾನುಭವಿಗಳು

ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟನೆ ಬಳಿಕ ಫಲಾನುಭವಿಗಳಿಗೆ ಯೋಜನೆಗಳ ಅನುಷ್ಠಾನ ಕುರಿತು ಅಭಿಪ್ರಾಯ ತಿಳಿಸಲು ವೇದಿಕೆಯಲ್ಲಿ ಅವಕಾಶ ನೀಡಲಾಗಿತ್ತು.

ಈ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಯೋಜನೆಯಿಂದ ತಮಗಾಗಿರುವ ಅನುಕೂಲದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ದರು. ಬಳಿಕ ಇಬ್ಬರು ಮಹಿಳೆಯರು ತಮ್ಮ ಕೈಯ್ಯಾರೆ ಮನೆಯಲ್ಲಿ ಮಾಡಿದ್ದ ಸಿಹಿ ತಂದು ವೇದಿಕೆಯಲ್ಲಿ ಕುಳಿತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌, ಶಾಸಕ ಎಚ್.ಡಿ. ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ತಿನಿಸಿದರು.

ತರೀಕೆರೆಯಿಂದ ಬಂದಿದ್ದ ಇನ್ನೋರ್ವ ಮಹಿಳೆ ತಮ್ಮ ಕೈಯ್ಯಾರೆ ಹೆಣೆದ ಶಾಲನ್ನು ಸಚಿವರಿಗೆ ನೀಡಿ ಅಭಿನಂದನೆ ಸಲ್ಲಿಸಿದರು.

---

10 ಕೆಸಿಕೆಎಂ 1

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಸಚಿವ ಕೆ.ಜೆ. ಜಾರ್ಜ್‌ ಅವರು ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಡಿಸಿ ಮೀನಾ ನಾಗರಾಜ್‌, ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಇದ್ದರು.