ಸಾರಾಂಶ
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ 2024-25 ನೇ ಸಾಲಿನ ಬಜೆಟ್ ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಮಂಗಳವಾರ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ 2024–25ನೇ ಸಾಲಿನ ಬಜೆಟ್ ಪೂರ್ವ ಭಾವಿ ನಡೆಯಿತು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಸಲಹೆ ನೀಡಿ, ಪಟ್ಟಣ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೂ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯ ಮೀಸಲಿಡಬೇಕು. ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಸಂದ ಸವಿನೆನಪಿಗಾಗಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆ ಆಯೋಜಿಸಲು ಅನುದಾನ ಮೀಡಲಿಬೇಕು. ಬಡವರ ಹೆಣ್ಣು ಮಕ್ಕಳ ವಿವಾಹಕ್ಕೆ ₹5 ಸಾವಿರ ಮೀಸಲಿಡಲು ಸಲಹೆ ನೀಡಿದರು. ಸಾಮಾನ್ಯ ವರ್ಗದ ಜನರಿಗೆ ವೈದ್ಯಕೀಯ ಚಿಕಿತ್ಸೆಗೆ, ಬಡವರ್ಗದವರ ಮಕ್ಕಳ ಶಿಕ್ಷಣಕ್ಕೆ ನೀಡುವ ಸಹಾಯಧನವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದರು.ಪಟ್ಟಣ ಪಂಚಾಯಿತಿ ಸದಸ್ಯರು ಸಲಹೆ ನೀಡಿ, ಪಟ್ಟಣದ ಐಡಿಎಸ್ಎಂ ಟಿ ಮಳಿಗೆ ಮೇಲೆ ಕಟ್ಟಡ ಅಥವಾ ಸಮುದಾಯ ಭವನ ನಿರ್ಮಾಣ ಮಾಡಬೇಕು. ಸ್ವಯಂ ಉದ್ಯೋಗದಡಿ ಪುರುಷ ಮತ್ತು ಮಹಿಳೆಯರಿಗೆ ಚಾಲನಾ ತರಬೇತಿ, ಬ್ಯೂಟಿಷಿಯನ್, ಟೈಲರಿಂಗ್ ತರಬೇತಿ ನೀಡಲು ಅನುದಾನ ಮೀಸಲಿಡಬೇಕು. ಪಟ್ಟಣದ ವಿವಿಧ ವಾರ್ಡ್ ಗಳಲ್ಲಿರುವ ಸಮುದಾಯ ಭವನ ದುರಸ್ತಿಗೆ, ಅಂಗನವಾಡಿಗಳ ಅಭಿವೃದ್ಧಿ, ಪಂಪ್ ಹೌಸ್ ಗಳ ನಿರ್ಮಾಣಕ್ಕೆ, ರಸ್ತೆಗಳಿಗೆ ಇಂಟರ್ ಲಾಕ್ ನಿರ್ಮಾಣ, ಪಟ್ಟಣದ ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಅನುದಾನ ಮೀಸಲಿಡಬೇಕು ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಜ. 23 ರಂದು ಬಜೆಟ್ ಮಂಡಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ, ಮಳಿಗೆ ಬಾಡಿಗೆ ಶೇ.90 ರಷ್ಟು ವಸೂಲಾಗಿದೆ. ಹೊರಗುತ್ತಿಗೆ ನೌಕರರ ಸಂಬಳ, ಇತರ ಸೌಲಭ್ಯಗಳಿಗೆ ಅನುದಾನ ಮೀಸಲಿಡಬೇಕಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಹೈಮಾಸ್ಟ್ ದೀಪ ದುರಸ್ತಿ ಮಾಡಲಾಗಿದೆ. ವಾರ್ಡ್ ಗಳಲ್ಲಿ ಅವಶ್ಯಕವಾಗಿ ಕೈಗೊಳ್ಳ ಬೇಕಾಗಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಬೇಕು. ಉಳಿಕೆಯಾದ ಅನುದಾನದಲ್ಲಿ ಅವಶ್ಯಕ ಕಾಮಗಾರಿ ಕೈಗೊಳ್ಳಲಾಗುವುದು. ಆಸ್ತಿ ತೆರಿಗೆ, ನೀರಿನ ಕಂದಾಯ, ಉದ್ದಿಮೆ ಪರವಾನಿಗೆ ಶುಲ್ಕ ಶೇಕಡ ನೂರಷ್ಟು ವಸೂಲಾತಿ ಮಾಡಲಾಗುವುದು ಎಂದರು.ಪಟ್ಟಣ ಪಂಚಾಯಿತಿ ಸದಸ್ಯರಾದ ಸೈಯದ್ ವಸೀಂ, ಉಮಾಕೇಶವ್, ಸುರಯ್ಯಬಾನು, ಜುಬೇದಾ, ಶೋಜಾ, ಕುಮಾರಸ್ವಾಮಿ, ಮುಕುಂದ, ಮುನಾವರಪಾಷ, ಸಿಬ್ಬಂದಿಗಳಾದ ಉಷಾ, ಚಂದ್ರಶೇಖರ್ ಪಾಲ್ಗೊಂಡಿದ್ದರು.