ಆರ್ಥಿಕ ಸ್ವಾವಲಂಬನೆ ಮಹಿಳಾ ಸಬಲೀಕರಣಕ್ಕೆ ಸಹಕಾರಿ

| Published : Aug 25 2025, 01:00 AM IST

ಸಾರಾಂಶ

ಆರ್ಥಿಕ ಸ್ವಾವಲಂಬನೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ

ಕುಷ್ಟಗಿ: ಆರ್ಥಿಕ ಸ್ವಾವಲಂಬನೆ ಮಹಿಳಾ ಸಬಲೀಕರಣಕ್ಕೆ ಸಹಕಾರಿ ಎಂದು ಎಸ್‌ವಿಸಿ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಬಸವರಾಜ ಹೇಳಿದರು.

ಪಟ್ಟಣದ ಎಸ್‌ವಿಸಿ ಸಂಸ್ಥೆ, ರಿಚ್ ಮಚ್ ಹೈಯರ್ ಅಕಾಡೆಮಿಕ್ ಫೌಂಡೇಶನ್ ಬೆಂಗಳೂರು, ಇಂಟೆಲ್ ಸಂಸ್ಥೆ ಬೆಂಗಳೂರು, ಎಸ್‌ವಿಸಿ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕುಷ್ಟಗಿ ಹಾಗೂ ಸಿವಿಸಿ ಫೌಂಡೇಶನ್, ಜಂಟಿಯಾಗಿ ಆಯೋಜಿಸಿದ್ದ ಉಚಿತ ಬ್ಯೂಟಿಷಿಯನ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಆರ್ಥಿಕ ಸ್ವಾವಲಂಬನೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಅದು ಉಳಿದ ಕ್ಷೇತ್ರಗಳಲ್ಲಿ ಮಹಿಳೆಯರನ್ನು ಸ್ವಾವಲಂಬನೆಗೆ ಪ್ರಚೋದಿಸುತ್ತದೆ. ಈ ಪ್ರಕ್ರಿಯೆ ಮೂಲಕ ಮಹಿಳೆ ಸಬಲೀಕರಣಗೊಳ್ಳುತ್ತಾಳೆ. ಹೀಗಾಗಿ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸುವುದು ಇಂದಿನ ಅಗತ್ಯ ಎಂದರು.

ಎಸ್‌ವಿಸಿ ಸಂಸ್ಥೆ ಹಾಗೂ ಸಿವಿಸಿ ಫೌಂಡೇಶನ್ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಉಚಿತ ಯೋಜನೆ ಹಮ್ಮಿಕೊಂಡಿವೆ. ಈ ನಿಟ್ಟಿನಲ್ಲಿ ಇಂಟೆಲ್ ಸಂಸ್ಥೆ ಹಾಗೂ ರಿಚ್ ಮಚ್ ಹೈಯರ್ ಅಕಾಡೆಮಿಕ್ ಫೌಂಡೇಶನ್ ಜತೆ ಸೇರಿ ಉಚಿತ ಬ್ಯೂಟಿಷಿಯನ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಎಸ್‌ವಿಸಿ ಸಂಸ್ಥೆಯ ಸಿಇಓ ಡಾ.ಜಗದೀಶ್ ಅಂಗಡಿ ಮಾತನಾಡಿ, ಆರ್ಥಿಕವಾಗಿ ಸದೃಢಗೊಂಡ ಮಹಿಳೆ ತವರು ಮನೆ ಹಾಗೂ ಗಂಡನ ಮನೆಗೆ ಬೆಳಕಾಗುತ್ತಾಳೆ. ಹಣ ಉಳಿತಾಯ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಪುರುಷರಿಗಿಂತ ಮಹಿಳೆಯರು ನಿಪುಣರು. ಬ್ಯೂಟಿಷಿಯನ್ ಕೋರ್ಸ್ ಖಂಡಿತವಾಗಿಯೂ ಮಹಿಳೆಯರಿಗೆ ಆರ್ಥಿಕವಾಗಿ ಮುಂದುವರೆಯಲು ಸಹಾಯಕವಾಗಿವೆ. ಆರ್ಥಿಕವಾಗಿ ಸದೃಢಗೊಂಡ ಮಹಿಳೆಯರಿಂದ ದೇಶದ ಸದೃಢತೆ ಹೆಚ್ಚುತ್ತದೆ ಎಂದು ಹೇಳಿದರು.

ಎಸ್‌ವಿಸಿ ಸೈನ್ಸ್ ಮತ್ತು ಕಾಮರ್ಸ್ ಪಿ ಯು ಕಾಲೇಜ್ ಪ್ರಾಂಶುಪಾಲ ಭೀಮಸೇನ್ ಆಚಾರ್ ಮಾತನಾಡಿ, ಬ್ಯೂಟಿಷಿಯನ್ ಕೋರ್ಸ್ ಮುಗಿದ ಮೇಲೆ ಸ್ವಂತ ಉದ್ಯೋಗ ಆರಂಭ ಮಾಡುವ ಮೂಲಕ ಪ್ರತಿ ತಿಂಗಳು ₹10,000 ತನಕ ಗಳಿಸುವ ಅವಕಾಶವಿದೆ. ಇದಕ್ಕಾಗಿ ಬೇಕಾಗುವ ಕಿಟ್ ತರಬೇತಿ ಮುಗಿದ ನಂತರ ಉಚಿತವಾಗಿ ಕೊಡಲಾಗುವುದು ಎಂದು ಹೇಳಿದರು.

ಎಸ್‌ವಿಸಿ ಪ್ರೌಢ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಭೀಮರಾವ್ ಕುಲಕರ್ಣಿ ಮಾತನಾಡಿ, ಖಾಸಗಿಯಾಗಿ ಬ್ಯೂಟಿಷಿಯನ್ ಕೋರ್ಸ್ ಕಲಿಯಲು ಶುಲ್ಕ ತೆರಬೇಕು. ಅದನ್ನು ಇಲ್ಲಿ ಉಚಿತವಾಗಿ ಕಲಿಸಿ ಕೊಡಲಾಗುತ್ತದೆ. ತರಬೇತಿ ನಂತರ ಒಂದು ತಿಂಗಳ ಪಾರ್ಲರ್ ಭೇಟಿ ಆಯೋಜಿಸಲಾಗುವುದು. ಆದ್ದರಿಂದ ಶಿಬಿರಾರ್ಥಿಗಳು ಯಶಸ್ವಿಯಾಗಿ ತರಬೇತಿ ಮುಗಿಸಿದರೆ ಮಾತ್ರ ಉಚಿತ ಕೊಡುಗೆ ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.

ಸುಜಾತಾ ಗಿರಿಸಾಗರ ನಿರೂಪಿಸಿದರು. ಒಟ್ಟು 25 ಜನ ಮಹಿಳೆಯರು ಈ ತರಬೇತಿಗೆ ದಾಖಲಾಗಿದ್ದರು.