ಸಾರಾಂಶ
ಸರ್ಕಾರದಿಂದ ಪಡಿತರ ಅಕ್ಕಿ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಉಚಿತ ವಿದ್ಯುತ್ ಪೂರೈಕೆ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ.
ಹುಬ್ಬಳ್ಳಿ
ಜನ ಬೆಂಬಲದಿಂದ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ಜನತೆಗೆ ಗ್ಯಾರಂಟಿಗಳನ್ನು ಕೊಡುವ ಮೂಲಕ ಎಲ್ಲ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಅವರು ಪೂರ್ವ ಕ್ಷೇತ್ರದಲ್ಲಿ ಬರುವ ನೇಕಾರ ನಗರ ರಣದಮ್ಮ ಕಾಲನಿ, ಹೂಗಾರ ಪ್ಲಾಟ್, ಈಶ್ವರನಗರದಲ್ಲಿ ಗುರುವಾರ ತೆರೆದ ವಾಹನದಲ್ಲಿ ಬೃಹತ್ ರೋಡ್ ಶೋ ಮೂಲಕ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಮತಯಾಚಿಸಿ ಮಾತನಾಡಿದರು.
ಸರ್ಕಾರದಿಂದ ಪಡಿತರ ಅಕ್ಕಿ, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ, ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಉಚಿತ ವಿದ್ಯುತ್ ಪೂರೈಕೆ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ವರ್ಷಕ್ಕೆ ₹1.20 ಲಕ್ಷ ಪ್ರತಿ ಮಹಿಳೆಗೆ ಸಿಗಲಿದೆ. ಬಿಜೆಪಿಯವರು 10 ವರ್ಷಗಳಿಂದ ಜನರಿಗೆ ಕೊಟ್ಟಿದ್ದು ಚೊಂಬು ಎಂದು ವಾಗ್ದಾಳಿ ನಡೆಸಿದರು.ಬಿಸಿಯೂಟ ಶುರು ಮಾಡಿದ್ದು ಕಾಂಗ್ರೆಸ್. ಮಕ್ಕಳಿಗೆ ಹಾಲು ಕೊಡುವ ಕ್ಷೀರಭಾಗ್ಯ ಆರಂಭಿಸಿದ್ದು ನಾವು, ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಕೊಟ್ಟವರು ನಾವು. ಹಲವಾರು ಕಾರ್ಯಕ್ರಮ ಕೊಟ್ಟಿದ್ದು ಕಾಂಗ್ರೆಸ್. ನಾವು ನೀಡಿದಂತಹ ಗ್ಯಾರಂಟಿಗಳನ್ನು ಕೊಡಲು ಬಿಜೆಪಿಯರಿಗೆ ತಾಕತ್ತಿಲ್ಲ. ಹಾಗಾಗಿ, ವಿನೋದ ಅಸೂಟಿ ಅವರಿಗೆ ಈ ಬಾರಿ ಮತ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು. ಈ ವೇಳೆ ಹು-ಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ ಕಿತ್ತೂರು, ಮುಖಂಡರಾದ ಶಫಿ ಮುದ್ದೇಬಿಹಾಳ, ಮಜರ್ ಖಾನ್, ಪಾಲಿಕೆ ಸದಸ್ಯೆ ಶಿವಗಂಗಮ್ಮ ಮಾನಶೆಟ್ಟರ್ ಸೇರಿದಂತೆ ಹಲವರಿದ್ದರು.