ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅವಿಭಜಿತ ದ.ಕ. ಜಿಲ್ಲೆ ಹಾಲಿನ ಕೊರತೆ ಎದುರಿಸುತ್ತಿದೆ. ಈ ಕೊರತೆ ನೀಗಿಸುವಲ್ಲಿ ಕೃಷಿ, ಪಶುಸಂಗೋಪನೆ, ಸಹಕಾರ ಇಲಾಖೆ, ಕೆಎಂಎಫ್ ಅಧಿಕಾರಿಗಳು ಹಾಗೂ ಹೈನುಗಾರ ಮುಖಂಡರು ಜತೆಯಾಗಿ ಸಮಾಲೋಚನೆ ನಡೆಸಿ ಹೈನುಗಾರರು ಎದುರಿಸುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿ ಯೋಜನೆ ರೂಪಿಸುವಂತೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.ಮಂಗಳೂರು ಕುಲಶೇಖರದ ಡೇರಿ ಆವರಣದಲ್ಲಿ ಬುಧವಾರ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಡೇರಿ ಉಗ್ರಾಣಕ್ಕೆ ಶಂಕುಸ್ಥಾಪನೆ ಮತ್ತು ವಸತಿ ಸಮುಚ್ಚಯ ಉದ್ಘಾಟಿಸಿ ಅವರು ಮಾತನಾಡಿದರು.ಪ್ರೋತ್ಸಾಹಧನ ಒದಗಿಸುವುದರಿಂದ ಮಾತ್ರ ಹೈನುಗಾರರ ಸಮಸ್ಯೆ ಬಗೆಹರಿಯದು. ಹೈನುಗಾರರ ದೈನಂದಿನ ನಿರ್ವಹಣಾ ವೆಚ್ಚ ಹೆಚ್ಚುತ್ತಿದೆ. ಪಶುಗಳ ಆಹಾರ ಪೂರೈಕೆ, ವೈದ್ಯಕೀಯ ಉಪಚಾರಕ್ಕೆ ಗರಿಷ್ಠ ವೆಚ್ಚ ಬೀಳುತ್ತಿದೆ. ಹೈನುಗಾರರಿಗೆ ಕಡಿಮೆ ವೆಚ್ಚದಲ್ಲಿ ಸಾಕಷ್ಟುಮೇವು ಪೂರೈಕೆ ಮತ್ತು ಇತರ ನಿರ್ವಹಣಾ ವೆಚ್ಚ ಕಡಿತಗೊಳಿಸಲು ಪರಿಹಾರೋಪಾಯ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಅಗತ್ಯ ಬೆಂಬಲ ಪಡೆಯಲು ನೆರವಾಗುವ ಭರವಸೆ ನೀಡಿದರು.
ಕ್ಯಾನ್ಸರ್, ಕಿಡ್ನಿ ಮುಂತಾದ ಮಾರಣಾಂತಿಕ ಸಮಸ್ಯೆ ಇರುವವರಿಗೆ ಆದ್ಯತೆ ಮೇರೆಗೆ ಕೆಎಂಎಫ್ ಏಜೆನ್ಸಿ ನೀಡುವಂತೆ ಅವರು ಮನವಿ ಮಾಡಿದರು.ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಗ್ರಾಮೋತ್ಥಾನ ಮೂಲಕ ರಾಷ್ಟ್ರೋತ್ಥಾನ ಆಗಬೇಕು. ಬಿಜೆಪಿ ಸರ್ಕಾರ ಅವಧಿಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಗೋಶಾಲೆ ಆರಂಭವಾಗಿದೆ. ಹಾಲನ್ನು ಮಾತ್ರವಲ್ಲ ಹಾಲಿನ ಉಪ ಉತ್ಪನ್ನಗಳನ್ನು ಲಾಭದಾಯಕವಾಗಿ ಮಾಡುವ ಬಗ್ಗೆ ಯೋಚಿಸಬೇಕು ಎಂದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಹೈನುಗಾರರಿಗೆ ಹೆಚ್ಚು ಶಕ್ತಿ ತುಂಬುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು, ಸರ್ಕಾರ ಕೆಲಸ ಮಾಡಬೇಕು. ಹೈನುಗಾರರ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು.
ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್ ಕೆ, ಮಂಜುನಾಥ ಭಂಡಾರಿ, ಮಹಾನಗರ ಪಾಲಿಕೆ ಸದಸ್ಯ ಭಾಸ್ಕರ್ ಕೆ, ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ, ಉಪ ನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿಎನ್, ನಿರ್ದೇಶಕರಾದ ರವಿರಾಜ ಹೆಗ್ಡೆ, ಎಸ್.ಪ್ರಕಾಶ್ಚಂದ್ರ ಶೆಟ್ಟಿ, ನರಸಿಂಹ ಕಾಮತ್, ಬಿ.ಸುಧಾಕರ ರೈ, ಸುಧಾಕರ ಶೆಟ್ಟಿ, ಸುಭದ್ರಾರಾವ್, ಸವಿತಾ ಎನ್.ಶೆಟ್ಟಿ, ಸ್ಮಿತಾ ಆರ್.ಶೆಟ್ಟಿ, ಬಿ.ಸದಾಶಿವ ಶೆಟ್ಟಿ, ಕಮಲಾಕ್ಷ ಹೆಬ್ಬಾರ್ ಇದ್ದರು.ಮೂರು ರು. ಪ್ರೋತ್ಸಾಹ ಧನಕ್ಕೆ ಬೇಡಿಕೆ: ಪಶು ಆಹಾರ ದರ ಹೆಚ್ಚಳ, ಮೇವಿನ ಅಲಭ್ಯತೆ ಮುಂತಾದ ಕಾರಣಗಳಿಂದ ಹಾಲು ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ಇತರ ಜಿಲ್ಲೆಗಳಿಗಿಂತ 3 ರು. ಹೆಚ್ಚುವರಿ ಪ್ರೋತ್ಸಾಹಧನ ಒದಗಿಸುವಂತೆ ಅಧ್ಯಕ್ಷತೆ ವಹಿಸಿದ ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕೋರಿದರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಕ್ಕೂಟ ಪ್ರತಿದಿನ ಒಟ್ಟು 4.24 ಲಕ್ಷ ಲೀ.ಹಾಲು ಪೂರೈಸುತ್ತಿದೆ. ಇದರಲ್ಲಿ ಒಕ್ಕೂಟ ವ್ಯಾಪ್ತಿಯಲ್ಲಿ 3.5 ಲಕ್ಷ ಲೀ.ನಷ್ಟುಹಾಲು ಮಾತ್ರ ಹೈನುಗಾರರಿಂದ ಪೂರೈಕೆಯಾಗುತ್ತಿದೆ. ದೈನಂದಿನ ಬಾಕಿ 1.60 ಲಕ್ಷ ಲೀ.ಹಾಲನ್ನು ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಿಂದ ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯ ಶೇ.95 ಮಂದಿಗೆ ಒಕ್ಕೂಟ ಹಾಲು ಪೂರೈಸುತ್ತಿದೆ ಎಂದರು.