ಕಾಣೆಯಾಗಿರುವ ವರದರಾಜು ರಸ್ತೆ ಹುಡುಕಿಕೊಡಿ!

| Published : May 25 2024, 12:47 AM IST

ಸಾರಾಂಶ

ಚಿಕ್ಕಬಳ್ಳಾಪುರ ನಗರದ ವರದರಾಜು ರಸ್ತೆಯನ್ನು ಆಟೋ ಮತ್ತು ದ್ವಿಚಕ್ರ ವಾಹನ ಸವಾರರು ಅಕ್ರಮವಾಗಿ ನಿಲುಗಡೆ ಸ್ಥಳವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ರಸ್ತೆ ಇದ್ದೂ ಇಲ್ಲದಂತಾಗಿದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಕೇಂದ್ರದಲ್ಲಿ ಶಿಸ್ತುಬದ್ಧ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ ನಿತ್ಯವೂ ಜನಸಾಮಾನ್ಯರು ಅಡ್ಡಾದಿಡ್ಡಿ ಸಂಚಾರಕ್ಕೆ ಸಿಕ್ಕಿ ಹೈರಾಣಾಗುತ್ತಿದ್ದರೂ, ಸಂಚಾರಿ ಪೊಲೀಸರು ಮಾತ್ರ ದಂಡವಸೂಲಿಗೆ ಸೀಮಿತರಾಗಿರುವುದು ಸಾರ್ವಜನಿಕರ ಕಂಗಣ್ಣಿಗೆ ಗುರಿಯಾಗಿದೆ. ಕೇಂದ್ರ ಗ್ರಂಥಾಲಯದ ಎದರು ಹಾಗೂ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿ ಇಂದಿರಾ ನಗರಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಿರುವ ವರದರಾಜು ರಸ್ತೆಯಿದೆ. ವರದರಾಜು ರಸ್ತೆಗೆ ದಾರಿ ಎಂದು ವಾರ್ಡಿನ ಸದಸ್ಯೆ ಜಿ.ಕೆ.ಜಯಲಕ್ಷ್ಮೀ ಅವರು ನಾಮಫಲಕ ಹಾಕಿಸಿದ್ದಾರೆ. ಆದರೆ ನಿತ್ಯವೂ ಇಲ್ಲಿ ದ್ವಿಚಕ್ರವಾಹನ, ಮತ್ತು ಆಟೋಗಳನ್ನು ನಿಲ್ಲಿಸುವುದರಿಂದಾಗಿ ರಸ್ತೆ ಇದ್ದೂ ಇಲ್ಲದಂತಾಗಿದ್ದು ಜನಸಂಚಾರಕ್ಕೆ ಭಾರೀ ಕಿರಿಕಿರಿಯಾಗಿದ್ದು ನಗರಾಡಳಿತ ಮತ್ತು ಸಂಚಾರಿ ಪೊಲೀಸ್ ಇಲಾಖೆಗೆ ಜನ ಹಿಡಿಶಾಪ ಹಾಕುತ್ತಾ ಸಾಗುವಂತಾಗಿದೆ.ಪಾರ್ಕಿಂಗ್‌ ಸ್ಥಳವಾದ ರಸ್ತೆ

ವರದರಾಜು ರಸ್ತೆಯಲ್ಲಿ ಜಿಲ್ಲಾ ಗಡಿನಾಡು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಘದ ಕಚೇರಿ ಸೇರಿದಂತೆ ಹತ್ತಾರು ಮನೆಗಳಿಗೆ ಹೋಗಿ ಬರಲು ಇದೊಂದೇ ರಸ್ತೆ ಇದೆ. ವಿದ್ಯಾರ್ಥಿಗಳು, ಹಿರಿಯರು ಮಹಿಳೆಯರು ಮಕ್ಕಳು ಇದೇ ರಸ್ತೆ ಮಾರ್ಗವಾಗಿ ಶಾಲಾ ಕಾಲೇಜಿಗೆ ಹೋಗಿಬರುತ್ತಾರೆ. ಇಂತಹ ರಸ್ತೆಯನ್ನು ಆಟೋ ಮತ್ತು ದ್ವಿಚಕ್ರ ವಾಹನ ಸವಾರರು ಅಕ್ರಮವಾಗಿ ನಿಲುಗಡೆ ಸ್ಥಳವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ರಸ್ತೆ ಇದ್ದೂ ಇಲ್ಲದಂತಾಗಿದೆ.

ಕಣ್ಮುಚ್ಚಿ ಕುಳಿತ ಸಂಚಾರಿ ಪೊಲೀಸ್

ನಗರದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾದ ಪೊಲೀಸರು, ಅಕ್ರಮ ನಿಲ್ದಾಣಗಳನ್ನು, ಪಾರ್ಕಿಂಗ್ ಏರಿಯಾಗಳನ್ನು ತೆರವುಗೊಳಿಸುವ ಕೆಲಸ ಮಾಡಬೇಕು. ಆದರೆ ಈ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಕ್ಕವೇ ಎರಡೂ ಬದಿಯಲ್ಲಿ ದ್ವಿಚಕ್ರವಾಹನ ಮತ್ತು ಆಟೋಗಳನ್ನು ಎಲ್ಲೆಂದರಲ್ಲೆ ನಿಲ್ಲಿಸುತ್ತಾ ಪಾದಚಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರೂ ಇದಕ್ಕೆ ಕಡಿವಾಣ ಹಾಕುತ್ತಿಲ್ಲ.

ಈಗಿನ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಸಹ ಮಾದರಿ ಚಿಕ್ಕಬಳ್ಳಾಪುರ ಮಾಡುವ ಮಾತಾಡಿದ್ದಾರೆ. ಯಾರು ಏನೇ ಹೇಳಿದರೂ ಕೂಡ ಇಲ್ಲಿನ ಅವೈಜ್ಞಾನಿಕ ಸಂಚಾರಿ ವ್ಯವಸ್ಥೆ, ಪಾರ್ಕಿಂಗ್ ಕಿರಿಕಿರಿ, ಬೇಜವಾಬ್ದಾರಿ ನಿರ್ವಹಣೆ ತಪ್ಪಿಲ್ಲ.

ಕುಗ್ಗಿದ ರಸ್ತೆಯ ಗಾತ್ರ

ಲಾರಿ ಬಸ್ಸು ಹೋಗಿ ಬರುವಷ್ಟು ವಿಸ್ತಾರವಾಗಿದ್ದ ವರದರಾಜು ರಸ್ತೆ ಈಗ ಕಿಷ್ಕಿಂದೆಯಂತಾಗಿದೆ. ಇದು ಜನವಸತಿ ಇರುವ ಮಾರ್ಗದ ರಸ್ತೆಯಾದ್ದರಿಂದಲೇ ಇಲ್ಲಿ ನಾಮಫಲಕ ಸಹ ಹಾಕಲಾಗಿದೆ.ಇಲ್ಲಿ ಆಗಿರುವ ಸಮಸ್ಯೆ ಇತ್ಯರ್ಥಕ್ಕೆ ಕೂಡಲೇ ಕ್ರಮವಹಿಸಿ ಜನಬಳಕೆಗೆ ಅನುಕೂಲ ಆಗಲೆಂದು ಬ್ಯಾರಿಕೇಡ್ ಹಾಕಿಸಲಾಗುವುದು ಎನ್ನುತ್ತಾರೆ 31ನೇ ವಾರ್ಡ್ ಸದಸ್ಯೆ ಜಿ.ಕೆ.ಜಯಲಕ್ಷ್ಮೀ.ಈ ಕುರಿತು ಸಂಚಾರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುಳಾರನ್ನು ಕೇಳಿದಾಗ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ಅಂಬೇಡ್ಕರ್ ವೃತ್ತದವರೆಗೆ ಎರಡೂ ಬದಿಯಲಿ ವಾಹನ ನಿಲುಗಡೆಗೆ ಅವಕಾಶ ನೀಡಿಲ್ಲ. ಯಾರಾದರೂ ವಾಹನ ನಿಲುಗಡೆ ಮಾಡಿದರೆ ಕಾನೂನು ರೀತಿ ಕ್ರಮವಹಿಸಲಾಗುವುದು. ವರದರಾಜು ರಸ್ತೆಯಲ್ಲಿ ಓಡಾಡಲು ಅನುವಾಗುವಂತೆ ಕೂಡಲೇ ಕ್ರಮವಹಿಸಲಾಗುವುದು ಎಂದರು.ಪಾದಚಾರಿ ಮಾರ್ಗವೇ ನಾಪತ್ತೆ

ಜಿಲ್ಲಾ ಕೇಂದ್ರದಲ್ಲಿ ಪಾದಚಾರಿ ಮಾರ್ಗಗಗಳೇ ಇಲ್ಲ. ಇದ್ದರೂ ಒತ್ತುವರಿಗೆ ಒಳಗಾಗಿವೆ.ಆದ್ದರಿಂದ ಹೊಸದಾಗಿ ಈ ನಗರಕ್ಕೆ ಬರುವ ಮಂದಿಗೆ ಕಾಡುವ ಪ್ರಶ್ನೆಗಳೆಂದರೆ ಈ ನಗರದಲ್ಲಿ ಪಾದಚಾರಿ ಮಾರ್ಗ ಇದೆಯೋ ಇಲ್ಲವೋ, ಇದ್ದರೆ ಎಲ್ಲಿದೆ ಎಂದು ಪ್ರಶ್ನಿಸುವಂತಾಗಿದೆ. ರಸ್ತೆಯ ಮೇಲೋ ಅಂಗಡಿ ಮುಂಗಟ್ಟೆಗಳ ಮುಂದೆಯೋ ರಸ್ತೆಯಲ್ಲಿರುವ ಈ ಧೂಳನ್ನು ತೆಗೆಯುವವರೇ ಇಲ್ಲ. ಇಲ್ಲಿ ಪಾದಚಾರಿ ಮಾರ್ಗ ಇದ್ದರೂ ಅಂಗಡಿ ಮುಂಗಟ್ಟೆಗಳ ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಿತ್ಯವೂ ಇಲ್ಲಿ ಪಾದಚಾರಿಗಳು ಒಂದಿಲ್ಲೊಂದು ಅಪಾಯಕ್ಕೆ ಒಳಗಾಗುತ್ತಲೇ ಇದ್ದಾರೆ.