ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಂಶ ಶೋಧಿಸಿ: ಡಿ.ಕೆ.ಶಿವಕುಮಾರ್

| Published : Aug 31 2024, 01:41 AM IST

ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಂಶ ಶೋಧಿಸಿ: ಡಿ.ಕೆ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಮಾಧ್ಯಮಗಳು ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಂಶಗಳನ್ನು ಶೋಧಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು. ರಾಮನಗರದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ರಾಮನಗರಮಾಧ್ಯಮಗಳು ಸುದ್ದಿ ಪ್ರಕಟಿಸುವ ಮುನ್ನ ಸತ್ಯಾಂಶಗಳನ್ನು ಶೋಧಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಮನಗರ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಅವರು, ಈಗಿನ ಮಾಧ್ಯಮಗಳು ಹೆಚ್ಚಾಗಿ ಅವರು ಹೀಗೆ ಹೇಳಿದರು, ಇವರು ಹೀಗೆ ಹೇಳಿದ್ದಾರೆ ಎಂದು ಪ್ರಶ್ನೆ ಮಾಡುವಿರಿಯೇ ಹೊರತು, ಅವರು ಹೇಳಿರುವುದರಲ್ಲಿ ಸತ್ಯಾಸತ್ಯತೆ ಇದೆಯೋ ಇಲ್ಲವೋ ಎಂದು ಪರಿಶೀಲಿಸುವುದಿಲ್ಲ. ಟಿವಿ ಮತ್ತು ಯೂಟೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಾಮಾಣಿಕವಾಗಿರುವ ಮಾಧ್ಯಮಗಳಿಗೆ ಸಮಾಜ ಗೌರವ ನೀಡುತ್ತದೆ. ಹೀಗಾಗಿ ನೀವು ಬಹಳ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.

ಮಾಧ್ಯಮಗಳಲ್ಲಿ ಅಪರಾಧ ಹಾಗೂ ಸಿನಿಮಾ ಸುದ್ದಿಗಳೇ ವೈಭವೀಕೃತ ಆಗುತ್ತಿವೆ. ಹೀಗಾಗಿ ಅವುಗಳನ್ನೇ ಹೆಚ್ಚಾಗಿ ತೋರಿಸುತ್ತೇವೆ ಎಂದು ನನ್ನ ಅನೇಕ ಮಾಧ್ಯಮ ಸ್ನೇಹಿತರೇ ಹೇಳಿದ್ದಾರೆ. ಮಾಧ್ಯಮಗಳ ಎಷ್ಟೋ ಲೇಖನಗಳು ಸರ್ಕಾರಗಳನ್ನು ಪರಿವರ್ತನೆ ಮಾಡಿವೆ. ಜೆ.ಎಚ್ ಪಟೇಲ್ ಅವರ ಕಾಲದಲ್ಲಿ ಬೆಂಗಳೂರಿಗರಿಗೆ ನೀರು ಪೂರೈಸುವ ಸಂಸ್ಥೆಯನ್ನು ಖಾಸಗೀಕರಣ ಮಾಡಬೇಕು ಎಂಬ ವಿಚಾರದಲ್ಲಿ ಎಂ.ಸಿ. ನಾಣಯ್ಯನವರು ಭಾಷಣ ಮಾಡಿದ್ದರು. ನಿಮ್ಮ ಬರವಣಿಗೆ ವಿಚಾರಧಾರೆ, ಸರ್ಕಾರ ಹಾಗೂ ಸಮಾಜಕ್ಕೆ ಆಧಾರ ಸ್ತಂಭವಾಗಬೇಕು. ಸರ್ಕಾರವನ್ನು ಟೀಕಿಸಿ ತಿದ್ದುವುದು ಸರ್ವೇ ಸಾಮಾನ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ಒಂದು ಪ್ರಮುಖ ಅಂಗ. ನಾಲ್ಕೂ ಅಂಗಗಳು ಪರಸ್ಪರ ಒಬ್ಬರು ಮತ್ತೊಬ್ಬರು ತಿದ್ದಬೇಕು. ಕೆಲವು ಮಾಧ್ಯಮಗಳಲ್ಲಿ ಎಲ್ಲವನ್ನು ಟೀಕೆ ಮಾಡುವ ಪ್ರವೃತ್ತಿ ಇದೆ. ಈಗ ಸಮಾಜ ನಿಮಗಿಂತಲೂ ಹೆಚ್ಚು ವೇಗವಾಗಿದೆ. ಸಿಟಿಜನ್ ಜರ್ನಲಿಸಂ ಎಂಬ ಪರಿಕಲ್ಪನೆ ಆರಂಭವಾಗಿದ್ದು, ಹಳ್ಳಿಯಲ್ಲಿರುವ ಹುಡುಗ ತಮ್ಮ ವಿಚಾರವನ್ನು ತಾನೇ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾನೆ. ಮಾಧ್ಯಮಗಳಲ್ಲಿ ಸ್ಪರ್ಧೆ ಹೆಚ್ಚಾಗಿದೆ. ನೀವು ನಿಮ್ಮ ಆತ್ಮಸಾಕ್ಷಿ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿ ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಂ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ಮಾಜಿ ಶಾಸಕ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್ , ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ಜನ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಶೇಷಾದ್ರಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ , ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ಬಿ.ವಿ.ಸೂರ್ಯಪ್ರಕಾಶ್ , ಪ್ರಧಾನ ಕಾರ್ಯದರ್ಶಿ ಟಿ.ಶಿವರಾಜ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಚಲುವರಾಜು ಮತ್ತಿತರರು ಉಪಸ್ಥಿತರಿದ್ದರು.

ಈ ಜಿಲ್ಲೆಯಿಂದ ನಾಲ್ವರು ಸಿಎಂಗಳಾಗಿದ್ದರು. ಅವರೆಲ್ಲ ಯಾವ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ ಎಂಬುದನ್ನೂ ನೀವು ಹೇಳಬೇಕು. ಕೆಂಗಲ್ ಹನುಮಂತಯ್ಯ ಅವರು ವಿಧಾನ ಸೌಧ ಕಟ್ಟಿಸಿದ್ದಾರೆ. ಅದೇ ರೀತಿ ಬೇರೆಯವರ ಸಾಧನೆ ಏನು ಎಂದು ಹೇಳಬೇಕು. ಕುಮಾರಸ್ವಾಮಿ ಅವರು ಈಗ ನಮ್ಮ ಜಿಲ್ಲೆ ಬಿಟ್ಟು ಹೋಗಿದ್ದಾರೆ, ಈಗ ಆ ವಿಚಾರಕ್ಕೆ ತಲೆಕೆಡಿಸಿಕೊಳ್ಳುವುದು ಬೇಡ. ಚರ್ಚೆ ಮಾಡುವುದೂ ಬೇಡ. ಅವರು ಮಂಡ್ಯಕ್ಕೆ ಹೋಗಿದ್ದಾರೆ. ಅವರು ಕಾರ್ಖಾನೆ ಮಾಡುತ್ತಾರಂತೆ ಮಾಡಲಿ, ನಾವು ಅದಕ್ಕಾಗಿ ಕಾಯುತ್ತಾ ಕೂತಿರೋಣ. ನಮ್ಮ ಹುಡುಗರನ್ನು ಕೆಲಸಕ್ಕೆಂದು ಅಲ್ಲಿಗೆ ಕಳುಹಿಸೋಣ. ನಮ್ಮ ಸರ್ಕಾರದಿಂದ ಅವರಿಗೆ ಯಾವ ಸಹಕಾರ ಬೇಕೋ ಕೊಡೋಣ. - ಡಿ.ಕೆ.ಶಿವಕುಮಾರ್ , ಉಪಮುಖ್ಯಮಂತ್ರಿ -------------------------------------------------------------------------

ನಾನು ತಪ್ಪು ಮಾಡಿಲ್ಲ, ಹೆದರುವುದಿಲ್ಲ - ಡಿ.ಕೆ.ಶಿವಕುಮಾರ್ ರಾಮನಗರ: ಯಾರೇ ತನಿಖೆ ಮಾಡಲಿ. ನಾನು ತಪ್ಪು ಮಾಡಿಲ್ಲ. ನಾನು ಸರಿಯಾಗಿದ್ದು, ಕೊಡುವ ಲೆಕ್ಕ ಸರಿಯಿದ್ದರೆ ಅಷ್ಟೇ ಸಾಕು. ವಿವಿಧ ಹಂತದ ನ್ಯಾಯಾಲಯಗಳಿವೆ. ಎಲ್ಲಾದರೂ ಒಂದು ಕಡೆ ನ್ಯಾಯ ಸಿಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ನಗರದ ಹೊರ ವಲಯದ ಹಿಲ್ ವ್ಯೂ ರೆಸಾರ್ಟ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಮನಗರ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದು ನಾನು ಹೇಳುತ್ತಲೇ ಇರುತ್ತೇನೆ. ನನ್ನ ಪ್ರಕರಣದ ತೀರ್ಪಿನ ಬಳಿಕ ನನ್ನ ದೈವಶಕ್ತಿ ದರ್ಶನಕ್ಕೆ ಹೋದಾಗ ನನ್ನ ಶಾಸಕ ಮಿತ್ರರು ಪ್ರಕರಣದ ತೀರ್ಪಿನ ಕುರಿತು ಆತಂಕಕ್ಕೆ ಒಳಗಾಗಿದ್ದರು. ಇದು ನನ್ನ ಪ್ರಕರಣವನ್ನು ಸಿಬಿಐ ತನಿಖೆ ಮಾಡಬೇಕಾ ಅಥವಾ ಲೋಕಾಯುಕ್ತ ತನಿಖೆ ಮಾಡಬೇಕಾ ಎಂಬುದಷ್ಟೇ ವಿಚಾರ. ಯಾರೇ ತನಿಖೆ ಮಾಡಲಿ. ನಾನು ತಪ್ಪು ಮಾಡಿಲ್ಲ, ಹೆದರುವುದಿಲ್ಲ ಎಂದರು.ನಾನು ತಿಹಾರ್ ಜೈಲಲ್ಲಿ ಇದ್ದಾಗಲೂ ಕಂಗೆಡದೆ ಪುಸ್ತಕ ಓದುತ್ತಾ ಕುಳಿತಿದ್ದೆ. ನಾನು ಎಂದಿಗೂ ನನ್ನ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ನನಗೆ ಯಾರು ತೊಂದರೆ ಕೊಡುತ್ತಾ ಬಂದಿದ್ದಾರೆ ಎಂದು ಹೇಳುವುದಿಲ್ಲ. ನಾನು ಎಂದಿಗೂ ಹಿಟ್ ಅಂಡ್ ರನ್ ಮಾಡುವುದಿಲ್ಲ. ನಾನು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.ತುಂಗಾಭದ್ರ ಅಣೆಕಟ್ಟಿಗೆ ಇತ್ತೀಚೆಗೆಭೇಟಿ ನೀಡಿದ್ದೆ. ಅಣೆಕಟ್ಟಿನ ಕ್ರಸ್ಟ್ ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ನಮ್ಮ ವಿರುದ್ಧ ಮುಗಿಬಿದ್ದರು. ನನ್ನಿಂದಲೇ ಗೇಟ್ ಮುರಿದಿರುವಂತೆ ಮಾತನಾಡಿದರು. ಅವರು ತಮ್ಮ ಚಟಕ್ಕಾಗಿ ಮಾತನಾಡುತ್ತಿದ್ದರು. ನಾನು ಆಗ ಅವರಿಗೆ ಉತ್ತರ ನೀಡಲಿಲ್ಲ. ಐದು ದಿನಗಳಲ್ಲೇ ಗೇಟ್ ದುರಸ್ತಿ ಮಾಡಿಸಿದೆವು. ಆಗ ನಾನು ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ಉತ್ತರ ಕೊಟ್ಟಿದ್ದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತೆ ಆಣೆಕಟ್ಟು ತುಂಬಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.