ಸಾರಾಂಶ
ಕನ್ನಡಪ್ರಭವಾರ್ತೆ ಚಿಂತಾಮಣಿ
ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುವ ಅಪ್ರಾಪ್ತರ ಪೋಷಕರನ್ನು ಕರೆಸಿ ಸಂಚಾರಿ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮಗಳ ಜರುಗಿಸುವುದಾಗಿ ಎಸ್ಪಿ ಕುಶಾಲ್ ಚೌಕ್ಸೆ ಎಚ್ಚರಿಕೆ ನೀಡಿದರು.ನಗರದಲ್ಲಿ ಇಂದು ಅಪ್ರಾಪ್ತರು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳನ್ನು ತಡೆದು ಚಿಂತಾಮಣಿ ನಗರ ಠಾಣೆ ಪೊಲೀಸರು ದಂಡ ವಿಧಿಸಿ ಅವರ ಪೋಷಕರಿಗೆ ಕಾನೂನಿನ ಅರಿವು ಮೂಡಿಸಿದರು.
ಕಾನೂನು ಪ್ರಕಾರ ಅಪರಾಧಎಸ್ಪಿ ಕುಶಾಲ್ ಚೌಕ್ಸೆ ಮಾತನಾಡಿ, ಅಪ್ರಾಪ್ತರು ಅಜಾಗರೂಕತೆಯಿಂದ ಮತ್ತು ಅತಿವೇಗ ವಾಹನಗಳನ್ನು ಚಾಲನೆ ಮಾಡುತ್ತಾರೆ, ಎದುರು ಬರುವ ವಾಹನಗಳ ಬಗ್ಗೆ ಅರಿವು ಇಲ್ಲದೆ ವಾಹನ ಚಾಲನೆ ಮಾಡುತ್ತಾರೆ ಹಾಗೂ ಹೆಲ್ಮೆಟ್ ಧರಿಸುವಲ್ಲಿ ನಿರ್ಲಕ್ಷ್ಯ ಮತ್ತು ಉದಾಸೀನತೆ ತೋರುವ ಜೊತೆಗೆ ಸಂಚಾರಿ ನಿಯಮ ಉಲ್ಲಂಘಿಸುತ್ತಾರೆ ಅಂತಹ ಅಪ್ರಾಪ್ತ ವಯಸ್ಕರಿಗೆ ದ್ವಿಚಕ್ರ ವಾಹನಗಳನ್ನು ನೀಡುವ ಪೋಷಕರು ಮೊದಲು ಎಚ್ಚರವಹಿಸಬೇಕು. ಅಪ್ರಾಪ್ತರಿಗೆ ವಾಹನ ನೀಡುವುದು ಕಾನೂನು ಪ್ರಕಾರ ಅಪರಾಧ ಎಂದು ಎಚ್ಚರಿಸಿದರು.
ವಾಹನ ಸಂಚಾರ ನಿಯಮ ಪಾಲಿಸದೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು, ಅಡ್ಡಾದಿಡ್ಡಿ ನಿಲ್ಲಿಸುವುದು ಸೇರಿದಂತೆ ಸಂಚಾರಿ ನಿಯಮಗಳನ್ನು ಅನುಸರಿಸದಿರುವುದು ಅಪಘಾತಗಳಿಗೆ ದಾರಿ ಮಾಡಿಕೊಡುತ್ತದೆ ಆದುದರಿಂದ ವಾಹನ ಸವಾರರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಬೇಕೆಂದು ಸೂಚಿಸಿದರು.ಪೋಷಕರ ವಿರುದ್ಧ ಕ್ರಮ
ಅಪ್ರಾಪ್ತ ವಯಸ್ಸಿನ ವಾಹನ ಚಾಲಕರ ನಿಯಂತ್ರಣ ಕುರಿತು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ ಚಿಕ್ಕಬಳ್ಳಾಪುರದಲ್ಲಿ ೪೦ ಹಾಗೂ ಬಾಗೇಪಲ್ಲಿಯಲ್ಲಿ ೨೨ ವಾಹನಗಳು ವಶಕ್ಕೆ ತೆಗೆದಿದ್ದು, ಅವರ ಪೋಷಕರನ್ನು ಕರೆಸಿ ಕಾನೂನಿನ ಅರಿವು ಮೂಡಿಸಲಾಗಿದೆ. ಅಪ್ರಾಪ್ತರಿಗೆ ಯಾವುದೇ ಕಾರಣಕ್ಕೂ ವಾಹನ ನೀಡಬಾರದು ಎಂದರು.ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಜಗನ್ನಾಥ್ ರೈ, ಡಿವೈಎಸ್‌ಪಿ ಮುರಳೀಧರ್, ನಗರ ಠಾಣೆಯ ಇನ್ಸ್‌ಪೆಕ್ಟರ್ ವಿಜಿ ಕುಮಾರ್, ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಶಿವರಾಜ್ ಸೇರಿದಂತೆ ಮತ್ತಿತರರು ಇದ್ದರು.