ಸಾರಾಂಶ
ಕೊಪ್ಪ: ಪಟ್ಟಣದಲ್ಲಿ ಪೊಲೀಸ್ ವಾಹನಕ್ಕೆ ಲಾಕ್ ಹಾಕಿ ದಂಡ ವಿಧಿಸಿದ ಅಪರೂಪದ ಘಟನೆ ಗುರುವಾರ ನಡೆಯಿತು. ಪಟ್ಟಣದ ಬಸ್ ನಿಲ್ದಾಣ ಸಮೀಪ ರಾಂಗ್ ಸೈಡ್ ಪಾರ್ಕಿಂಗ್ ಮಾಡಿದ್ದ ನರಸಿಂಹರಾಜಪುರ ಪೊಲೀಸ್ ಠಾಣೆಗೆ ಸೇರಿದ ಸಿಪಿಐ ವಾಹನಕ್ಕೆ ಕೊಪ್ಪ ಪೊಲೀಸ್ ಸಿಬ್ಬಂದಿ ಲಾಕ್ ಅಳವಡಿಸಿ, ದಂಡ ವಿಧಿಸುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂದು ಮತ್ತೊಮ್ಮೆ ತಿಳುವಳಿಕೆ ನೀಡಿದ್ದಾರೆ. ಕೊಪ್ಪ ಪೊಲೀಸ್ ಠಾಣಾಧಿಕಾರಿ ಬಸವರಾಜ್ ಕೊಪ್ಪ ಪಟ್ಟಣಕ್ಕೆ ಬಂದಾಗಿನಿಂದ ಕೊಪ್ಪ ಪಟ್ಟಣದ ಟ್ರಾಫಿಕ್ ವ್ಯವಸ್ಥೆ ಸರಿಪಡಿಸಲು ಅವಿರತವಾಗಿ ಶ್ರಮವಹಿಸುತ್ತಿದ್ದು, ಇದಕ್ಕೆ ಸಾರ್ವಜನಿಕ ವಲಯದಲ್ಲಿ ಸಹ ಸಹಕಾರ ವ್ಯಕ್ತವಾಗಿದೆ.
ಕಳೆದ ವಾರವಷ್ಟೇ ಕಂದಾಯ ಇಲಾಖೆ ವಾಹನಕ್ಕೆ ದಂಡ ವಿಧಿಸಿ, ಕಾನೂನು ಎಲ್ಲರಿಗೂ ಒಂದೇ ಎಂದು ಸಾಬೀತು ಮಾಡಿದ್ದ ಠಾಣಾಧಿಕಾರಿ ಗುರುವಾರ ಪೊಲೀಸ್ ವಾಹನಕ್ಕೆ ದಂಡವಿಧಿಸುವ ಮೂಲಕ ಪೊಲೀಸ್ ಇಲಾಖೆ ಸಹ ಕಾನೂನಿನ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿ ಸಾರ್ವಜನಿಕರು ಹುಬ್ಬೇರುವಂತೆ ಮಾಡಿದ್ದಾರೆ.ಇನ್ನಾದರೂ ಎಲ್ಲಾ ಸರ್ಕಾರಿ ಇಲಾಖೆ, ರಾಜಕಾರಣಿ ಮತ್ತು ಸಾರ್ವಜನಿಕರು ತಮ್ಮ ವಾಹನಗಳನ್ನು ಸರಿಯಾದ ರೀತಿಯಲ್ಲಿ ನಿಲುಗಡೆ ಮಾಡಿ, ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸಹ, ಕೊಪ್ಪ ಪಟ್ಟಣದ ಕಾನೂನು-ಸುವ್ಯವಸ್ಥೆ ಸೇರಿದಂತೆ ಗಣೇಶ ವಿಸರ್ಜನೆಯಲ್ಲಿ ಸಹ ದೇಶೀ ಆಚರಣೆ ಮಾಡುವಂತೆ ಮತ್ತು ಯಾವುದೇ ತರಹದ ಕಾನೂನಿನ ವಿರುದ್ಧ ಚಟುವಟಿಕೆ ಕಂಡುಬಂದಲ್ಲಿ ಕೊಪ್ಪ ಪೊಲೀಸ್ ಠಾಣೆಗೆ ಬಂದು ಮುಕ್ತವಾಗಿ ಮಾಹಿತಿ ನೀಡುವ ಮೂಲಕ ಜನತೆ ಸಹಕರಿಸಬೇಕು ಎಂದು ಕರೆ ನೀಡಿದ್ದಾರೆ. ಇವರ ಈ ಸಾಮಾಜಿಕ ನ್ಯಾಯ ರಾಜ್ಯದ ಎಲ್ಲಾ ಕಡೆಗೆ ಮಾದರಿಯಾಗಲಿ ಎಂದು ಕೊಪ್ಪ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದಾರೆಜೀಪ್ ಚಾಲಕ ೫೦೦ ರು. ದಂಡ ಪಾವತಿಸಿ ಜೀಪ್ ಬಿಡಿಸಿಕೊಂಡು ಹೋಗಿದ್ದಾರೆ.