ಸಾರಾಂಶ
ಇದೀಗ ಎಲ್ಲೆಡೆ ಮಳೆ ಪ್ರಾರಂಭವಾಗಿದ್ದು, ಕೆಲವೆಡೆ ಅನಾಹುತ ಸಂಭವಿಸಿವೆ. ಈ ಬಾರಿ ಪ್ರತಿ ವರ್ಷಕ್ಕಿಂತ ಅತಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರ ಪ್ರಕಾರ ಮಹಾನಗರ ಪಾಲಿಕೆ ಸರ್ವಸನ್ನದ್ಧವಾಗಬೇಕು.
ಹುಬ್ಬಳ್ಳಿ:
ಈ ಬಾರಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಅಧಿಕಾರಿಗಳು ನಗರದಲ್ಲಿರುವ ರಾಜಕಾಲುವೆ ಸೇರಿದಂತೆ ಚರಂಡಿಯಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ತ್ವರಿತಗತಿಯಲ್ಲಿ ನಡೆಸಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಧಿಕಾರಿಗಳಿಗೆ ಸೂಚಿಸಿದರು.ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಶಾಸಕರ ಅಧ್ಯಕ್ಷತೆ ಹು-ಧಾ ಮಹಾನಗರ ಪಾಲಿಕೆ. ಲೋಕೋಪಯೋಗಿ ಇಲಾಖೆ ಮತ್ತು ಕುಡಿಯುವ ನೀರಿನ ಸರಬರಾಜು ಎಲ್ ಆ್ಯಂಡ್ ಟಿ ಅಧಿಕಾರಿಗಳ ಹಾಗೂ ಸೆಂಟ್ರಲ್ ಕ್ಷೇತ್ರದ ಪಾಲಿಕೆ ಸದಸ್ಯರ ಉಪಸ್ಥಿತಿಯಲ್ಲಿ ಮಳೆಗಾಲ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದರು.
ಇದೀಗ ಎಲ್ಲೆಡೆ ಮಳೆ ಪ್ರಾರಂಭವಾಗಿದ್ದು, ಕೆಲವೆಡೆ ಅನಾಹುತ ಸಂಭವಿಸಿವೆ. ಈ ಬಾರಿ ಪ್ರತಿ ವರ್ಷಕ್ಕಿಂತ ಅತಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರ ಪ್ರಕಾರ ಮಹಾನಗರ ಪಾಲಿಕೆ ಸರ್ವಸನ್ನದ್ಧವಾಗಬೇಕು. ರಾಜಕಾಲುವೆಯಲ್ಲಿ ಆಳವಾಗಿ ಹೂಳೆತ್ತುವ ಕೆಲಸ ನಡೆಯಬೇಕಿದೆ. ಪ್ರತಿ ಬಾರಿ ರಾಜ ಕಾಲುವೆಗಳಿಂದ ಮಳೆ ನೀರು ಹೊರಬಂದು ಜನರಿಗೆ ತೊಂದರೆಯಾಗುತ್ತಿದೆ. ಇದರ ಪ್ರಕಾರ ಹೂಳೆತ್ತುವ ಕೆಲಸ ತೀವ್ರವಾಗಿ ನಡೆಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಗೋಕುಲ ರಸ್ತೆಯಿಂದ ಸಿದ್ಧಾರೂಢರ ಮಠಕ್ಕೆ ಹೋಗುವ ಆರ್.ಎನ್. ಶೆಟ್ಟಿ ರಸ್ತೆ ಒಳ ಚರಂಡಿ ಹಾಗೂ ಸಿಸಿ ರಸ್ತೆ ಕಾಮಗಾರಿಗಳ ಸಮಸ್ಯೆ ಆಗುವ ಕುರಿತು ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ಜೂ. 11ರಂದು ಕಾಮಗಾರಿ ವೀಕ್ಷಿಸಿ ನಂತರ ಸಭೆ ನಡೆಸುವುದಾಗಿ ತಿಳಿಸಿದರು. 24*7 ಎಲ್ ಆ್ಯಂಡ್ ಟಿ ಕುಡಿಯುವ ನೀರಿನ ಯೋಜನೆ ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಈ ವೇಳೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಉಮೇಶಗೌಡ ಕೌಜಿಗೇರಿ, ಬೀರಪ್ಪ ಖoಡೆಕರ್, ಉಮಾ ಮುಕುಂದ, ರೂಪಾ ಶೆಟ್ಟಿ, ಚಂದ್ರಿಕಾ ಮೇಸ್ತ್ರಿ, ಮೀನಾಕ್ಷಿ ವಂಟಮುರಿ, ಮುಖಂಡರಾದ ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಲೋಕೋಪಯೋಗಿ ಇಲಾಖೆ ಎಂಜನಿಯರ್ ವಿಜಯಕುಮಾರ್, ಸಿ.ವಿ. ಪಾಟೀಲ್, ಪಾಲಿಕೆಯ ವಲಯ ಸಹಾಯಕ ಆಯುಕ್ತರು ಇದ್ದರು.