ಸಾರಾಂಶ
ನಗರದ ಶಹರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ, ಮೂವರು ಶಾಸಕರು ಸೇರಿ 43 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ 31 ವರ್ಷಗಳ ಹಿಂದೆ ನಡೆದ ಅಯೋಧ್ಯಾ ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಜ. 3ರಂದು ನಗರದ ಶಹರ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ, ಮೂವರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯ, ಮಹಾನಗರ ಪಾಲಿಕೆ ಸದಸ್ಯರು ಸೇರಿ 43 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.ಪ್ರತಿಪಕ್ಷ ನಾಯಕರು ಸೇರಿದಂತೆ 43 ಜನರು ಜ. 3ರಂದು ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಆರು ಕೋಟಿ ಜನರ ಪ್ರತಿನಿಧಿಯಾದ ಮುಖ್ಯಮಂತ್ರಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದರಲ್ಲದೇ ನಿಂದಿಸಿ ಅವಮಾನಿಸಿದ್ದಾರೆ. ಠಾಣೆಗೆ ಮುತ್ತಿಗೆ ಹಾಕಿ ನಾಗರಿಕ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ಶುಕ್ರವಾರ ಶಹರ ಪೋಲಿಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆ ಪೊಲೀಸರು, ಆರ್. ಅಶೋಕ ಅವರನ್ನು ಎ 1 ಆರೋಪಿಯನ್ನಾಗಿ ಮಾಡಿದ್ದರೆ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ ಕ್ರಮವಾಗಿ ಎ 2, ಎ3 ಹಾಗೂ ಎ.7 ಆರೋಪಿಗಳಾಗಿದ್ದಾರೆ. ವಿಪ ಸದಸ್ಯ ಪ್ರದೀಪ ಶೆಟ್ಟರ ಎ. 8 ಆರೋಪಿಯಾಗಿದ್ದಾರೆ.ಇವರ ಜತೆಗೆ ಮಹಾನಗರ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಉಮೇಶಗೌಡ ಕೌಜಲಗಿ, ಸಂತೋಷ ಚವ್ಹಾಣ್, ರೂಪಾ ಶೆಟ್ಟಿ, ತಿಪ್ಪಣ್ಣ ಮಜ್ಜಗಿ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.