ಸಾರಾಂಶ
ರಾಮನಗರ: ಕಲರ್ಸ್ ಕನ್ನಡ ಖಾಸಗಿ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ತನಿಷಾ ಕುಪ್ಪುಂಡ ಅವರು, ಬೋವಿ ಸಮುದಾಯ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಅವಮಾನ ಮಾಡಿದ್ದಾರೆ ಎಂಬ ಆರೋಪದ ಮೇಲೆ, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಖಿಲ ಕರ್ನಾಟಕ ಬೋವಿ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರು ನ.12ರಂದು ನೀಡಿದ್ದ ದೂರಿನ ಮೇರೆಗೆ, ತನಿಷಾ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಬಿಗ್ ಬಾಸ್ ರಿಯಾಲಿಟಿ ಷೋನಲ್ಲಿ ನ.8ರಂದು ತನಿಷಾ ಅವರು ಇತರ ಸ್ಪರ್ಧಿ ಡ್ರೋಣ್ ಪ್ರತಾಪ್ ಅವರೊಂದಿಗೆ ಮಾತನಾಡುವಾಗ, ಬೋವಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ಪದ್ಮಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಸಮುದಾಯಕ್ಕೆ ಅವಮಾನವಾಗುವಂತೆ ಮಾತನಾಡಿರುವ ತನಿಷಾ ಅವರ ವಿರುದ್ಧ ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು. ಸ್ಪರ್ಧೆಯಿಂದ ಅವರನ್ನು ಹೊರ ಹಾಕಬೇಕು ಎಂದು ಒತ್ತಾಯಿಸಿದ್ದರು.ಬಾಕ್ಸ್............ವಿಡಿಯೋ ಕಲೆ ಹಾಕಲು ಮುಂದಾದ ಪೊಲೀಸರು
ರಾಮನಗರ: ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ತನಿಷಾ ಕುಪ್ಪುಂಡ ಅವರು, ಬೋವಿ ಸಮುದಾಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇರೆಗೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ತನಿಷಾ ಮಾತನಾಡಿರುವ ವಿಡಿಯೋ ಕಲೆಹಾಕಲು ಮುಂದಾಗಿದ್ದಾರೆ. ಈ ಕುರಿತು ಬಿಗ್ ಬಾಸ್‌ಗೆ ನೋಟಿಸ್ ನೀಡಲಾಗಿದೆ.ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಭೋವಿ ಸಮಾಜದ ರಾಜ್ಯಾಧ್ಯಕ್ಷೆ ಪದ್ಮಾರವರು ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದೆ. ತನಿಷಾ ಮಾತನಾಡಿರುವ ವಿಡಿಯೋ ನೀಡುವಂತೆ ಬಿಗ್‌ಬಾಸ್‌ಗೆ ನೋಟಿಸ್ ನೀಡಲಾಗಿದೆ. ಒರಿಜಿನಲ್ ವಿಡಿಯೋ ಕಲೆಹಾಕಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗುವುದು. ಎಫ್‌ಎಸ್‌ಎಲ್ ವರದಿ ಬಂದ ಬಳಿಕ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮಾಗಡಿ ಡಿವೈಎಸ್ಪಿ ಪ್ರವೀಣ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.