ರಾಮನಗರ: ನಗರಸಭಾ ಸದಸ್ಯ ಅಜ್ಮತ್ ಉಲ್ಲಾ ಖಾನ್ ಕೊಲೆಗೆ ಯತ್ನಿಸಿದ ಐವರು ಯುವಕರ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೆಹಮಾನಿಯ ನಗರ ಬಡಾವಣೆ ವಾಸಿ ಬರ್ಕತ್, ತುಫೇಲ್ ಪಾಷ ಅಲಿಯಾಸ್ ಕವೇಲಿ, ಆಸೀಫ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಘಟನೆ ವಿವರ:

ನಗರಸಭಾ ಸದಸ್ಯ ಅಜ್ಮತ್ ಉಲ್ಲಾ ಖಾನ್ ತಮ್ಮ ದ್ವಿಚಕ್ರ ವಾಹನದಲ್ಲಿ ನಗರಸಭೆ ಕಚೇರಿಗೆ ತೆರಳಲು ನಗರದ ರೈಲ್ವೆ ನಿಲ್ದಾಣದ ಬಳಿಯ ಅಂಡರ್ ಪಾಸ್ ಬಳಿ ಬರುತ್ತಿದ್ದಾಗ ಹಿಂಬದಿಯಿಂದ ಎರಡು ಬೈಕುಗಳಲ್ಲಿ ಬಂದ ಐವರು ಯುವಕರು ಡಿಕ್ಕಿ ಹೊಡೆದಿದ್ದಾರೆ. ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಅಜ್ಮತ್, ಆ ಯುವಕರ ಕೈಯಲ್ಲಿ ಮಾರಕಾಸ್ತ್ರಗಳಿರುವುದನ್ನು ಕಂಡು ಕ್ಷಣಾರ್ಧದಲ್ಲಿ ಬಿಸ್ಮಿಲ್ಲಾ ಷಾ ಖಾದ್ರಿ ದರ್ಗಾದ ಕಡೆಯಿಂದ ಪರಾರಿಯಾಗಿದ್ದಾರೆ. ಯುವಕರು ಅಜ್ಮತ್ ರವರ ದ್ವಿಚಕ್ರ ವಾಹನದಲ್ಲಿಯೇ ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಾ ಅವರನ್ನು ಬೆನ್ನಟ್ಟಿದ್ದಾರೆ. ಅಜ್ಮತ್ ಸಿಗದಿದ್ದಾಗ ಅವರ ಮನೆ ಬಳಿಗೆ ಮೂವರು ಯುವಕರು ತೆರಳಿದ್ದಾರೆ. ರಸ್ತೆಯಲ್ಲಿ ರಾಜಾರೋಷವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಾ ಕಾರು ಮತ್ತು ದ್ವಿಚಕ್ರ ವಾಹನವನ್ನು ಜಖಂಗೊಳಿಸಿದ್ದಾರೆ. ಈ ಘಟನೆಯಿಂದಾಗಿ ಸಾರ್ವಜನಿಕವಾಗಿ ಆತಂಕದ ವಾತಾವರಣ ಉಂಟಾಗಿತ್ತು. ಈ ಹಿಂದೆಯೂ ಅಜ್ಮತ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಆದರೀಗ ಕೊಲೆ ಯತ್ನ ನಡೆದಿದ್ದು, ಹಳೇ ವೈಷಮ್ಯದ ಅನುಮಾನ ವ್ಯಕ್ತವಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಅಜ್ಮತ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ರಾಮನಗರ ಪುರ ಪೊಲೀಸ್ ಠಾಣೆಗೆ ಹಾಜರಾಗಿ ಪ್ರಕರಣ ದಾಖಲಿಸಿದ್ದಾರೆ.