ಡಿಜೆ ಪ್ರತಿಭಟನೆ: ರೇಣುಕಾಚಾರ್ಯ ಮತ್ತಿತರರ ವಿರುದ್ಧ ಎಫ್ಐಆರ್

| Published : Aug 31 2025, 01:08 AM IST

ಡಿಜೆ ಪ್ರತಿಭಟನೆ: ರೇಣುಕಾಚಾರ್ಯ ಮತ್ತಿತರರ ವಿರುದ್ಧ ಎಫ್ಐಆರ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಗಣೇಶೋತ್ಸವ ವೇಳೆ ದಾವಣಗೆರೆ ಜಿಲ್ಲೆಯಲ್ಲಿ ಡಿ.ಜೆ. ಸೌಂಡ್‌ ಬಳಕೆಗೆ ಅನುಮತಿ ಕೋರಿ ಪ್ರತಿಭಟಿಸಿದ್ದ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರರ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಗಣೇಶೋತ್ಸವ ವೇಳೆ ದಾವಣಗೆರೆ ಜಿಲ್ಲೆಯಲ್ಲಿ ಡಿ.ಜೆ. ಸೌಂಡ್‌ ಬಳಕೆಗೆ ಅನುಮತಿ ಕೋರಿ ಪ್ರತಿಭಟಿಸಿದ್ದ ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತಿತರರ ವಿರುದ್ಧ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಇತರರ ವಿರುದ್ಧ ಬಿಎನ್ಎಸ್ 2023(U/s 126(2), 189(2), 190, 287, 353(2), (49) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಡಿಜೆ ಸೌಂಡ್‌ ಸಿಸ್ಟಂ ಬಳಕೆ ನಿಷೇಧಿಸಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದ್ದರೂ ಅದನ್ನೆಲ್ಲಾ ಧಿಕ್ಕರಿಸಿ, ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಿಜೆ ಬಳಸುವಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇತರರು ಆ.23ರಂದು ಹಳೇ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿ, ಶ್ರೀ ಜಯದೇವ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ್ದರು. ಯುವಕರಿಗೆ ಪ್ರಚೋದನೆ ಮಾಡಿ, ಪ್ರತಿಭಟಿಸಿದ ಕಾರಣಕ್ಕಾಗಿ ರೇಣುಕಾಚಾರ್ಯ ಇತರರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಆ.28ರಂದು ಸುದ್ದಿಗೋಷ್ಠಿ ನಡೆಸಿ, ಅನ್ಯ ಧರ್ಮದ ಭಾವನೆಗಳಿಗೆ ಧಕ್ಕೆ ಮಾಡಿರುವ ಆರೋಪವೂ ರೇಣುಕಾಚಾರ್ಯ ಮೇಲಿದ್ದು, ಪೊಲೀಸರು ಸ್ವಯಂಪ್ರೇರಿತ ಎಫ್ಐಆರ್‌ ದಾಖಲು ಮಾಡಿದ್ದಾರೆ.

ತಾಕತ್ತಿದ್ದರೆ ಬಂಧಿಸಲಿ-ಗುಟುರು:

ದಾವಣಗೆರೆ: ಶ್ರೀ ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಸೌಂಡ್‌ ಬಳಕೆಗೆ ಅನುಮತಿ ನೀಡದಿದ್ದರೆ ಹೋರಾಟ ಅನಿವಾರ್ಯ. ನನ್ನ ವಿರುದ್ಧ ನೂರಾರು ಕೇಸ್ ಹಾಕಲಿ. ತಾಕತ್ತಿದ್ದರೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನನ್ನನ್ನು ಬಂಧಿಸಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಮ್ಮ ವಿರುದ್ಧ ಎಫ್‌ಐಆರ್ ದಾಖಲಾದ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಹೊನ್ನಾಳಿಯ ಬಂಬೂ ಬಜಾರ್ ಗಣೇಶ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣೇಶೋತ್ಸವಕ್ಕಷ್ಟೇ ಅಲ್ಲ, ಈದ್ ಮಿಲಾದ್ ಹಬ್ಬಕ್ಕೂ ಡಿಜೆಗೆ ಅವಕಾಶ ನೀಡಲಿ. ನಾವೇನೂ ಬೇಡ ಅಂದಿಲ್ಲ. ಡಿಜೆ ಸೌಂಡ್‌ಗೆ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ನನ್ನ ಮೇಲೆ ಎಫ್ಐಆರ್ ಹಾಕಲಾಗಿದೆ. ಸುಮೋಟೋ ಕೇಸ್ ದಾಖಲಿಸಿರುವುದೂ ಗಮನಕ್ಕೆ ಬಂದಿದೆ. ಈಗಾಗಲೇ ನನ್ನ ಮೇಲಿನ ನೂರಾರು ಕೇಸ್ ಸಹ ಖುಲಾಸೆಯಾಗಿವೆ ಎಂದಿರುವ ರೇಣುಕಾಚಾರ್ಯ, ನನ್ನ ಮೇಲೆ ಏನು ಕೇಸ್ ಬೇಕಾದರೂ ಹಾಕಿಕೊಳ್ಳಲಿ. ಮೊದಲು ಡಿಜೆ ಸೌಂಡ್‌ಗೆ ಅನುಮತಿ ನೀಡಲಿ ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

- - -

(ಟಾಪ್‌ ಕೋಟ್‌)

ಹೊನ್ನಾಳಿ, ದಾವಣಗೆರೆ, ಚಾಮರಾಜ ನಗರ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ನನ್ನ ವಿರುದ್ಧ ನೂರಾರು ಕೇಸ್ ಹಾಕಿದ್ದರು. ಆದರೂ ನಾನು ಅಂಜಲಿಲ್ಲ. ಪೊಲೀಸರು ನನ್ನ ಮೇಲೆ ಕೇಸ್ ಹಾಕಿ, ಕುಗ್ಗಿಸಲು ಆಗುವುದಿಲ್ಲ. ಡಿಜೆ ಬೇಕೆಂಬುದು ಎಲ್ಲರ ಅಪೇಕ್ಷೆಯಾಗಿದ್ದು, ಹಾಗಾಗಿ ನಾನೂ ಒತ್ತಾಯ ಮಾಡುತ್ತೇನೆ. ಡಿಸಿ, ಎಸ್ಪಿ ಜೊತೆ ಮಾತನಾಡಿದ್ದು, ಡಿಜೆಗೆ ಅನುಮತಿ ಸಿಗುವ ವಿಶ್ವಾಸವಿದೆ.

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ

- - -

(ಫೋಟೋ: ರೇಣುಕಾಚಾರ್ಯ)