ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಸಂದರ್ಭ ಬಳಸಿದ ಬಟ್ಟೆ ಹೊಟ್ಟೆಯಲ್ಲೇ ಉಳಿಸಿ ಗಂಭೀರ ನಿರ್ಲಕ್ಷ್ಯ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ಹಾಗೂ ಆಸ್ಪತ್ರೆಯ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿ ನೊಂದ ಮಹಿಳೆಯ ಪತಿ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ ಗಗನ್‌ದೀಪ್ ಫೆ.೨೩ರಂದು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಬಳಿಕ ಇದೊಂದು ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣವಾದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಮೆಡಿಕಲ್ ಬೋರ್ಡ್‌ಗೆ ವರದಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರದ ಪ್ರಕಾರ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣದಲ್ಲಿ ಮೆಡಿಕಲ್ ಬೋರ್ಡ್‌ಗೆ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಇದೀಗ ವೈದ್ಯಕೀಯ ಮಂಡಳಿ ವರದಿ ಪರಿಶೀಲಿಸಿ, ವೈದ್ಯರ ಕಡೆಯಿಂದ ನಿರ್ಲಕ್ಷ್ಯ ಉಂಟಾಗಿದೆ ಎಂದು ವರದಿ ನೀಡಿದ್ದು, ಅದರಂತೆ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಗಗನ್‌ದೀಪ್ ಬಂಗಾರಡ್ಕ ಅವರು ತಮ್ಮ ಪತ್ನಿಯನ್ನು ಹೆರಿಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ೨೦೨೪ರ ನ.೨೭ರಂದು ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ನಡೆಸಿದ್ದರು. ಡಿ.೨ರಂದು ಬಾಣಂತಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ತೀವ್ರ ಅನಾರೋಗ್ಯ ಕಂಡುಬಂದಿದ್ದು, ಸಿಜೇರಿಯನ್ ಮಾಡಿದ ವೈದ್ಯರಿಗೆ ಪತ್ನಿಯ ಅನಾರೋಗ್ಯದ ಪ್ರತೀ ಹಂತ ತಿಳಿಸುತ್ತಿದ್ದರೂ ಅವರು ನೋವಿಗೆ ಔಷಧಿ ನೀಡಿದ್ದರೇ ಹೊರತು ಮೂಲ ಕಾರಣ ತಿಳಿಯಲಿಲ್ಲ, ಅಂತಿಮವಾಗಿ ಸ್ಕ್ಯಾನ್ ಮಾಡಿಸಿದಾಗ ಹೊಟ್ಟೆಯಲ್ಲಿ ಅನಪೇಕ್ಷಿತ ವಸ್ತು ಇರುವುದು ಪತ್ತೆಯಾಗಿತ್ತು.ಈ ಹಂತದಲ್ಲೂ ವೈದ್ಯರು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಗಗನ್‌ದೀಪ್ ಆಪಾದಿಸಿದ್ದರು. ಹೆರಿಗೆಯಾದ ೩ ತಿಂಗಳ ಬಳಿಕ ಮತ್ತೊಂದು ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿದ್ದು, ಬಾಣಂತಿಯ ಹೊಟ್ಟೆಯಲ್ಲಿ ಬಟ್ಟೆ ಸಿಕ್ಕಿತ್ತು. ಸಿಜೇರಿಯನ್ ಮಾಡಿ ಸ್ಟಿಚ್ ಮಾಡುವ ಮುನ್ನ ಆಪರೇಶನ್‌ಗೆ ಬಳಸಿದ ಬಟ್ಟೆ ಹೊಟ್ಟೆಯಲ್ಲೇ ಉಳಿದುಕೊಂಡಿತ್ತು. ಈ ಸಂಬಂಧ ಎಲ್ಲ ದಾಖಲೆಗಳನ್ನು ಮುಂದಿಟ್ಟುಕೊಂಡು ಗಗನ್‌ದೀಪ್ ಪೊಲೀಸ್ ದೂರು ನೀಡಿದ್ದರು. ಪೊಲೀಸರು ಮೆಡಿಕಲ್ ಬೋರ್ಡ್ ವರದಿ ಕೇಳಿದ್ದರು.
೨ ದಿನಗಳಲ್ಲಿ ವರದಿ:ಪ್ರಕರಣ ಬೆಳಕಿಗೆ ಬರುತ್ತಲೇ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. ಅದರಂತೆ ದ.ಕ. ಜಿಲ್ಲಾಧಿಕಾರಿ ನೇಮಿಸಿದ ಉನ್ನತ ತನಿಖಾ ತಂಡ ಈಗಾಗಲೇ ಪ್ರಕರಣದ ಬಗ್ಗೆ ತನಿಖೆ ನಡೆಸಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದೇವೆ ಎಂದು ತನಿಖಾ ತಂಡದ ಮುಖ್ಯಸ್ಥರಾದ ಜಿಲ್ಲಾ ವೈದ್ಯಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದ್ದಾರೆ. ತನಿಖಾ ತಂಡದಲ್ಲಿ ಜಿಲ್ಲಾ ಸರ್ಜನ್ ಡಾ.ಶಿವಪ್ರಕಾಶ್, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ಜಿಲ್ಲಾ ಕುಟುಂಬ ಕಲ್ಯಾಣ ಆಧಿಕಾರಿ ಡಾ.ದೀಪಾ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮತ್ತು ಪುತ್ತೂರು ಸರ್ಕಾರಿ ಆಸ್ಪತ್ರೆಯ ಫಿಸೀಶಿಯನ್ ಡಾ.ಯದುರಾಜ್ ಇದ್ದರು.