ಅಧಿಕಾರ ದುರ್ಬಳಸಿ ಎಫ್‌ಐಆರ್‌ ದಾಖಲು: ಆರೋಪ

| Published : Sep 17 2025, 01:05 AM IST

ಸಾರಾಂಶ

ಮಾಗಡಿ: ಹಿಂದಿನ ಚಾಳಿ ಎಫ್ಐಆರ್ ಸಂಸ್ಕೃತಿಯನ್ನು ಶಾಸಕ ಬಾಲಕೃಷ್ಣ ಮುಂದುವರಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಎಂ. ಎನ್.ಮಂಜುನಾಥ್ ಆರೋಪಿಸಿದರು.

ಮಾಗಡಿ: ಹಿಂದಿನ ಚಾಳಿ ಎಫ್ಐಆರ್ ಸಂಸ್ಕೃತಿಯನ್ನು ಶಾಸಕ ಬಾಲಕೃಷ್ಣ ಮುಂದುವರಿಸುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಎಂ. ಎನ್.ಮಂಜುನಾಥ್ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಇಎಸ್ ವೃತ್ತದ ಅಭಿವೃದ್ಧಿ ನೆಪದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ನಿರ್ಮಿಸಿದ್ದ ಗಾಂಧಿ ಪುತ್ಥಳಿಯನ್ನು ಮುಂದಿನ ತಿಂಗಳಲ್ಲಿ ಗಾಂಧಿ ಜಯಂತಿ ಬರಲಿದ್ದು ಅಲ್ಲಿಯವರೆಗೂ ಪುತ್ಥಳಿ ತೆರವು ಮಾಡದಂತೆ ಮತ್ತು ತೆರವಾದ ಪುತ್ಥಳಿ ಯಾವ ಜಾಗದಲ್ಲಿ ನಿರ್ಮಾಣ ಮಾಡುತ್ತಾರೆಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಕ್ಕೆ, ಪಿಡಬ್ಲ್ಯೂಡಿ ಸಹಾಯಕ ಇಂಜಿನಿಯರ್ ಕೆ.ಸಿ.ನಾರಾಯಣ್ ಅವರಿಂದ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿ ಸರ್ಕಾರಿ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಹಾಕಿರುವುದಾಗಿ ಸುಳ್ಳು ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಅಧಿಕಾರ ದುರ್ಬಳಸಿಕೊಂಡು ನಮ್ಮ ವಿರುದ್ಧ ಎಫ್ಐಆರ್ ದಾಖಲಿಸಿ ಬೆದರಿಸುತ್ತಿದ್ದಾರೆ ಎಂದು ಎಂ.ಎನ್. ಮಂಜು ಆರೋಪಿಸಿದರು.

ಪ್ರಶ್ನೆ ಮಾಡುವುದೇ ತಪ್ಪಾ? :

ಹಿಂಭಾಗಿಲಿನಿಂದ ಪುರಸಭೆ ಅಧಿಕಾರ ಹಿಡಿದಿರುವ ಶಾಸಕ ಬಾಲಕೃಷ್ಣ ಸಾಮಾನ್ಯ ಸಭೆಯಲ್ಲಿ ತಮಗೆ ಬೇಕಾದ ರೀತಿ ನಡವಳಿಕೆ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದ ವಿಷಯಗಳಿಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಗಾಂಧಿ ಪುತ್ಥಳಿ ತೆರವಿಗೆ ಅನುಮತಿ ಪಡೆದಿಲ್ಲ ಮತ್ತು ಈ ಪುತ್ಥಳಿಯನ್ನು ಎಲ್ಲಿ ಇಡಬೇಕೆಂಬ ಬಗ್ಗೆ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಸೆ.11ರಂದು ಬೆಳಗ್ಗೆ ಪೊಲೀಸ್ ರಿಸರ್ವ್ ವ್ಯಾನ್‌ನಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ನಮ್ಮಿಂದ ಹೇಳಿಕೆ ಪಡೆದಿದ್ದಾರೆ. ಅದೇ ದಿನ 5 ಗಂಟೆಗೆ ಅಧಿಕಾರಿಯಿಂದ ಕಂಪ್ಲೇಂಟು ಕೊಡಿಸಿ ಎಫ್ಐಆರ್ ಮಾಡಿಸಿದ್ದಾರೆ. ನಾವು ಕೊಲೆ ಬೆದರಿಕೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರೆ ನಾವು ಠಾಣೆಗೆ ಬರುವ ಮೊದಲೇ ಅವರು ದೂರು ಕೊಡಬೇಕಾಗಿತ್ತು ಇದೆಲ್ಲಾ ಶಾಸಕರ ಸಂಚಾಗಿದ್ದು 44 ಜನ ಜೆಡಿಎಸ್ ಮುಖಂಡರ ಮೇಲೆ ಪ್ರಕರಣ ಹಾಕಲು ಸಿದ್ಧತೆ ಮಾಡಿಕೊಂಡಿದ್ದು ನಾವು ಠಾಣೆಗೆ ಬಂದ ನಂತರ ಕಾಂಗ್ರೆಸ್‌ ಮುಖಂಡರು ಜೈಕಾರ ಧಿಕ್ಕಾರ ಹಾಕಿದ್ದು ಅವರ ವಿರುದ್ಧವೂ ಕೂಡ ಕಾನೂನಾತ್ಮಕವಾಗಿ ಎಫ್ಐಆರ್ ಆಗಬೇಕು. ಸೂಕ್ತ ಕ್ರಮ ವಹಿಸದಿದ್ದರೆ ನಾವು ಕೂಡ ಕಾನೂನಾತ್ಮಕ ಹೋರಾಟಕ್ಕೆ ಸಿದ್ದರಿದ್ದೇವೆ ಎಂದು ಎಂ.ಎನ್. ಮಂಜುನಾಥ್ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್ ಕುಮಾರ್ ಹೇಳಿದರು.

ಎಂಪಿಗೆ ಆಹ್ವಾನವಿಲ್ಲ: ಶಿಕ್ಷಕರ ದಿನಾಚರಣೆಯನ್ನು ತಾಲೂಕು ಆಡಳಿತ ಆಚರಿಸಿದೆ. ಶಾಸಕ ಬಾಲಕೃಷ್ಣರ ಭಾವಚಿತ್ರ ಒಳಗೊಂಡಂತೆ ಕಾಂಗ್ರೆಸ್‌ ಮುಖಂಡರ ಭಾವಚಿತ್ರ ಹಾಕಲಾಗಿದೆ. ಕೇಂದ್ರದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವಚಿತ್ರ ಹಾಕುತ್ತಾರೆ. ಸ್ಥಳೀಯ ಸಂಸದರ ಭಾವಚಿತ್ರ ಹಾಕದೆ ಉದ್ದೇಶ ಪೂರಕವಾಗಿಯೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಮಾಡಬಾಳ್ ಕೆಂಪೇಗೌಡ ಆರೋಪಿಸಿದರು.

ಜೆಡಿಎಸ್ ಮುಖಂಡರಾದ ವಿಜಯಕುಮಾರ್, ಕೆ.ವಿ.ಬಾಲು, ರಂಗಣಿ, ಪಂಚೆ ರಾಮಣ್ಣ, ಸಾಗರ್, ಬಾಲಕೃಷ್ಣ, ಮೂರ್ತಿ, ಕೆಂಪಸಾಗರ ಮಂಜುನಾಥ್, ಶಿವಕುಮಾರ್, ರೇವಣ್ಣ, ಗುಂಡ, ಕರಡಿ ನಾಗರಾಜು, ತಗ್ಗೀಕುಪ್ಪೆ ರವಿ, ನಯಜ್, ಉಮೇಶ್ ಇತರರಿದ್ದರು.