ನಿಧಿ ದುರಾಸೆಗಾಗಿ ನಗರದ ಅಕ್ಕಿಪೇಟೆ ವೆಂಕಟೇಶ್ವರ ದೇವಸ್ಥಾನದ ವೆಂಕಟೇಶ ಮೂರ್ತಿಯನ್ನು ಭಗ್ನಗೊಳಿಸಿದ್ದಲ್ಲದೇ ಮೂರ್ತಿಯನ್ನು ಕಳ್ಳತನ ಮಾಡಿರುವ ವ್ಯಕ್ತಿಗಳ ಬಂಧನಕ್ಕೆ ಒತ್ತಾಯಿಸಿ ಹಳೇಹುಬ್ಬಳ್ಳಿಯ ಸಾರ್ವಜನಿಕರು ಹಾಗೂ ವೆಂಕಟೇಶ್ವರ ದೇವಸ್ಥಾನದ ಭಕ್ತರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ: ನಿಧಿ ದುರಾಸೆಗಾಗಿ ನಗರದ ಅಕ್ಕಿಪೇಟೆ ವೆಂಕಟೇಶ್ವರ ದೇವಸ್ಥಾನದ ವೆಂಕಟೇಶ ಮೂರ್ತಿಯನ್ನು ಭಗ್ನಗೊಳಿಸಿದ್ದಲ್ಲದೇ ಮೂರ್ತಿಯನ್ನು ಕಳ್ಳತನ ಮಾಡಿರುವ ವ್ಯಕ್ತಿಗಳ ಬಂಧನಕ್ಕೆ ಒತ್ತಾಯಿಸಿ ಹಳೇಹುಬ್ಬಳ್ಳಿಯ ಸಾರ್ವಜನಿಕರು ಹಾಗೂ ವೆಂಕಟೇಶ್ವರ ದೇವಸ್ಥಾನದ ಭಕ್ತರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು. ಈ ನಡುವೆ ದೇವಸ್ಥಾನದ ಅಧ್ಯಕ್ಷರು ಮೂವರು ವಿರುದ್ಧ ಕಸಬಾ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ದೂರಿನನ್ವಯ ಎಫ್‌ಐಆರ್‌ ದಾಖಲಾಗಿದೆ.ಮಾ. 16ರಂದು ಭಕ್ತರು ನಮಸ್ಕಾರ ಮಾಡುವುದಕ್ಕಾಗಿ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದಾಗ ಮೂರ್ತಿ ಇಲ್ಲದಿರುವುದು ಗಮನಕ್ಕೆ ಬಂದಿದೆ. ಆಗ ಮೂರ್ತಿ ಕಳ್ಳತನವಾದ ವಿಷಯ ಸಾರ್ವಜನಿಕವಾಗುತ್ತಿದ್ದಂತೆ ಹಳೇ ಹುಬ್ಬಳ್ಳಿಯ ಅಕ್ಕಿಪೇಟೆ, ಜಂಗ್ಲಿಪೇಟೆ, ಕುರುಬರ ಓಣಿ, ಬೆಳಮಕರ ಓಣಿಯ ಜನರು ಸೇರಿಕೊಂಡು ಪೊಲೀಸರ ಗಮನಕ್ಕೆ ತರಲಾಗಿತ್ತು. ಅಷ್ಟೇ ಅಲ್ಲದೇ ನಿಧಿ ಆಸೆಗಾಗಿ ರಮೇಶ ಮುತಾಲಿಕದೇಸಾಯಿ, ನಾರಾಯಣ ಮುತಾಲಿಕದೇಸಾಯಿ ಹಾಗೂ ಅವರ ಕುಟುಂಬಸ್ಥರು ವೆಂಕಟೇಶ್ವರ ಮೂರ್ತಿಯನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಸಾರ್ವಜನಿಕರ ಒತ್ತಾಯದ ಮೇರೆ ಮುತಾಲಿಕದೇಸಾಯಿ ಅವರ ಕುಟುಂಬವನ್ನು ಕರೆದು ವಿಚಾರಣೆ ನಡೆಸಿದಾಗ ಕಳ್ಳತನ ಖಚಿತವಾಗಿದೆ. ಕೂಡಲೇ ಅವರಿಂದ ವೆಂಕಟೇಶ್ವರ ಮೂರ್ತಿಯನ್ನು ಮರಳಿ ದೇವಸ್ಥಾನಕ್ಕೆ ತರಿಸಿದ್ದರು. ಆದರೆ, ಘಟನೆ ನಡೆದು ನಾಲ್ಕು ದಿನಗಳಾದರೂ ಆರೋಪಿಗಳನ್ನು ಈ ವರೆಗೆ ಬಂಧಿಸದಿರುವುದು ಖಂಡನೀಯ. ಕೂಡಲೇ ಆರೋಪಿಗಳನ್ನು ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಮುಂಬರುವ ದಿನಗಳಲ್ಲಿ ಪೊಲೀಸರ ವಿರುದ್ಧವೇ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ಮನವಿಯನ್ನು ಕಸಬಾ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ ಅವರಿಗೆ ಪ್ರತಿಭಟನಾಕಾರರು ಸಲ್ಲಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಕಸಬಾಪೇಟೆ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.