ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗ
ಸಾರ್ವಜನಿಕರ ದೂರುಗಳಿಗೆ ಬೇಜವಾಬ್ದಾರಿತನ ತೋರುವುದು ಹಾಗೂ ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಲೋಪವೆಸಗುವುದು ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಎಚ್ಚರಿಕೆ ನೀಡಿದರು.ಕೇಂದ್ರ ಹಾಗೂ ರಾಜ್ಯ ಪುರಸ್ಕೃತ ಯೋಜನೆಗಳಡಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸುತ್ತಿರುವ ಕುಡಿಯುವ ನೀರು ಸರಬರಾಜು ಮತ್ತು ಒಳ ಚರಂಡಿ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಸಲಹಾ ಮತ್ತು ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಚಿತ್ರದುರ್ಗ ನಗರದ ಒಳ ಚರಂಡಿ ಜಾಲದ ಮಾರ್ಗಗಳ ನಕ್ಷೆಯನ್ನು ಸಿದ್ದಪಡಿಸಬೇಕು ಎಂದು ಸೂಚಿಸಿದರು.ವೆಟ್‍ವಲ್(ತೇವ ಬಾವಿ)ಗಳ ಸಾಮರ್ಥ್ಯಕ್ಕೆ ತಕ್ಕಂತೆ ನಗರದಲ್ಲಿನ ಕಲುಷಿತ ನೀರು ವೆಟ್‍ವೆಲ್ ಸೇರುತ್ತಿಲ್ಲ. ಇದರ ಬದಲಾಗಿ ನಗರದ ರಸ್ತೆಗಳ ಮೇಲೆಯ ಚರಂಡಿ ನೀರು ಹರಿದಾಡುವ ಪ್ರಸಂಗ ಎದುರಾಗಿದೆ. ಇದು ಸಾರ್ವಜನಿಕ ಸ್ವಾಸ್ಥ್ಯಕ್ಕೆ ಕಂಟಕವಾಗುತ್ತದೆ. ವೆಟ್‍ವೆಲ್ ನಿರ್ಮಿಸುವ ವೇಳೆಯಲ್ಲಿಯೇ ತ್ಯಾಜ್ಯ ನೀರು ವೆಟ್‍ವೆಲ್ ಸೇರುವಂತೆ ಕೊಳಚೆ ನೀರು ಸಂಪರ್ಕ ಜಾಲವನ್ನು ಅಭಿವೃದ್ಧಿ ಪಡಿಸಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡರು.
ಆದರೆ ನಗರ ಸಭೆ ಹಾಗೂ ಒಳಚರಂಡಿ ಮಂಡಳಿಯ ಸಮನ್ವಯತೆ ಕೊರತೆಯಿಂದ ವೆಟ್‍ವೆಲ್ ಹಾಗೂ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಕೊಳಚೆ ನೀರು ಸೇರುತ್ತಿಲ್ಲ. ವಾರ್ಡ್‍ಗಳ ತ್ಯಾಜ್ಯ ನೀರು ರಸ್ತೆ ಹಾಗೂ ಮನೆಗಳಿಗೆ ನುಗ್ಗುತ್ತಿರುವ ಬಗ್ಗೆ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ದೂರು ನೀಡುತ್ತಾರೆ. ನಗರಸಭೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಾರೆ. ಈ ರೀತಿಯ ವರ್ತನೆಯಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದರು.ರಾಜ ಕಾಲುವೆ ಸೇರಿದಂತೆ ಇತರೆ ಕಾಲುವೆ ಪ್ರದೇಶಗಳಲ್ಲಿ ನಗರಸಭೆಯಿಂದ ಸಮೀಕ್ಷೆ ನಡೆಸಿ ನಿಯಮಾನುಸಾರ ಬಫರ್ ಜೋನ್‍ಗಳನ್ನು ಗುರುತಿಸಬೇಕು. ಜಲಮೂಲಗಳ ಬಫರ್ ಜೋನ್‍ಗಳಲ್ಲಿ ಯಾವುದೇ ಕಟ್ಟಡ ನಿರ್ಮಾಣಗಳಿಗೆ ಅನುಮತಿ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.
ಅಮೃತ್ ಯೋಜನೆಯಡಿ, ಮೊಳಕಾಲ್ಮೂರು, ನಾಯಕನಹಟ್ಟಿ, ಹೊಳಲ್ಕೆರೆ ಪಟ್ಟಣದಲ್ಲಿ ಮೇಲ್ಮಟ್ಟದ ಜಲಸಂಗ್ರಹಗಾರಗಳನ್ನು ನಿರ್ಮಿಸಲು ಅವಶ್ಯಕತೆ ಇರುವ ಸ್ಥಳವನ್ನು ಮುಖ್ಯಾಧಿಕಾರಿಗಳು ಗುರುತಿಸಿ ಹಸ್ತಾತರಿಸುವ ಕೆಲಸ ಮಾಡಬೇಕು. ಈಗಾಗಲೇ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪೂರ್ಣಗೊಂಡು, ಪಾಲನೆ ಮತ್ತು ನಿರ್ವಹಣೆಯ ಅವಧಿ ಮುಗಿದ ಕಾಮಗಾರಿಗಳನ್ನು ಸಂಬಂಧಪಟ್ಟ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಹಸ್ತಾಂತರ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಸುಮಿತಾ ರಘು, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ. ಮಂಜುಳ ಶ್ರೀಕಾಂತ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಅನಿಲ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೇಮಂತ ಕುಮಾರ್, ಚಿತ್ರದುರ್ಗ ನಗರ ಸಭೆ ಆಯುಕ್ತೆ ರೇಣುಕಾ ಸೇರಿದಂತೆ ಇತರೆ ನಗರಸಭೆಗಳ ಪೌರಾಯುಕ್ತರು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.ಮಲ್ಲಾಪುರ ಕೆರೆ ದಂಡೆ ಮರು ಸಮೀಕ್ಷೆ
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿನ ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿರುವ ಮಲ್ಲಾಪುರ ಕೆರೆ ದಂಡೆ ಮರು ಸಮೀಕ್ಷೆ ಕಾರ್ಯ ಕೈಗೊಳ್ಳುವಂತೆ ಭೂಮಾಪನ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ನಿರ್ದೇಶನ ನೀಡಿದರು. ಮಲ್ಲಾಪುರ ಕೆರೆ ಏರಿಯನ್ನು ಎತ್ತರಿಸಲಾಗಿದೆ. ಇದರಿಂದ ಕೆರೆಯಲ್ಲಿ ನೀರಿನ ಸಂಗ್ರಹ ಪ್ರಮಾಣ ಹೆಚ್ಚಾಗಿ ಜನವಸತಿ ಪ್ರದೇಶಗಳಿಗೆ ತೊಂದರೆಯಾಗಿದೆ. ತಾತ್ಕಾಲಿಕವಾಗಿ ಕೆರೆಯಿಂದ 2 ಅಡಿ ನೀರು ಹೊರ ಹರಿಸಲು ಸಭೆಯಲ್ಲಿ ಅನುಮತಿಸಲಾಯಿತು. ಸಿರಿಗೆರೆ, ಭರಮಸಾಗರ ನೀರು ಸರಬರಾಜು ನಿರ್ವಹಣೆಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹಸ್ತಾಂತರಿಸಿಕೊಳ್ಳುವಂತೆ ಹಾಗೂ ಬಾಕಿ ಉಳಿಸಿಕೊಂಡಿರುವ ನಿರ್ವಹಣೆ ವೆಚ್ಚವನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.