ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಎಫ್‌ಐಆರ್: ಜಿಲ್ಲಾಧಿಕಾರಿ ಎಚ್ಚರಿಕೆ

| Published : Jun 07 2024, 12:32 AM IST

ತಾಯಿ, ಶಿಶು ಮರಣ ಪ್ರಕರಣ ಮರುಕಳಿಸಿದರೆ ಎಫ್‌ಐಆರ್: ಜಿಲ್ಲಾಧಿಕಾರಿ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿ ಮತ್ತು ಶಿಶು ಮರಣ ತಡೆಗೆ ವಿಶೇಷ ಗಮನ ಹರಿಸಬೇಕು.

ಹೊಸಪೇಟೆ: ವ್ಯೆದ್ಯರು ಇಲ್ಲವೇ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ತಾಯಿ ಅಥವಾ ಮಗು ಸಾವಿಗೀಡಾದ ಬಗ್ಗೆ ದೂರು ಬಂದಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಅಧಿಕಾರಿಗಳು, ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ತಾಯಿ ಮರಣ ಮತ್ತು ಶಿಶು ಮರಣ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಯಿ ಮತ್ತು ಶಿಶು ಮರಣ ತಡೆಗೆ ವಿಶೇಷ ಗಮನ ಹರಿಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ವೈದ್ಯರು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎನ್ನುವ ದೂರು ಬಾರದ ಹಾಗೆ ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿ ದಿನ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಆರೈಕೆಯ ಬಗ್ಗೆ ಗಮನ ಹರಿಸಬೇಕು. ಶುಶ್ರೂಷಣಾ ಸಿಬ್ಬಂದಿ ರೋಗಿಗಳೊಂದಿಗೆ ಆತ್ಮೀಯತೆಯಿಂದ ನಡೆದುಕೊಳ್ಳಬೇಕು. ಚಿಕಿತ್ಸೆ ಕೊಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಬೇರೊಬ್ಬರನ್ನು ಹೊಣೆಯಾಗಿಸಬಾರದು ಎಂದರು.

ಸಕಾಲದಲ್ಲಿ ಸಿಗಬೇಕಾಗಿದ್ದ ಆರೋಗ್ಯ ಸೇವೆ ಸಿಗದ ಕಾರಣಕ್ಕೆ ತಾಯಿ ಮರಣ, ಶಿಶುಮರಣ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವ ದೂರುಗಳು ಬಂದಲ್ಲಿ ಮತ್ತು ತಾಯಿ ಮತ್ತು ಶಿಶು ಮರಣ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸಿದಲ್ಲಿ ಯಾವುದೇ ಮುಲಾಜಿಲ್ಲದೇ ತನಿಖೆಗೊಳಪಡಿಸಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ ಯಾರೇ ಇರಲಿ ಅಂತವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಡವರಿಗೆ ಚಿಕಿತ್ಸೆ ಮೊದಲು ಕೊಡಿ:

ಸರ್ಕಾರಿ ಆಸ್ಪತ್ರೆಗಳಿಗೆ ಬಹುತೇಕ ಕೃಷಿ ಕಾರ್ಮಿಕರು, ಕಡು ಬಡವರೇ ಹೆಚ್ಚಾಗಿ ಬರುತ್ತಾರೆ. ವೈದ್ಯರೇ ದೇವರೆಂದು ಭಾವಿಸಿ ಅವರು ಆಸ್ಪತ್ರೆಯಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಪ್ರೀತಿ, ವಿಶ್ವಾಸ ಇಟ್ಟುಕೊಂಡಿರುತ್ತಾರೆ. ವೈದ್ಯರು ಏನೇ ಹೇಳಿದರೂ ಅವರು ಅದಕ್ಕೆ ಸಮ್ಮತಿ ಸೂಚಿಸುತ್ತಾರೆ. ನನ್ನ ಮಗಳು ಆರಾಮಿರಬೇಕು. ಹೆರಿಗೆ ಸುಸೂತ್ರವಾಗಿ ನಡೆದು ಕೂಸು ಬದುಕಬೇಕು ಎಂಬುದು ಪ್ರತಿಯೊಬ್ಬ ತಂದೆ, ತಾಯಿ ಪಾಲಕರ ಆಸೆ ಆಗಿರುತ್ತದೆ. ಆಸ್ಪತ್ರೆಗೆ ಯಾರೇ ಬರಲಿ ಅವರೊಂದಿಗೆ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ನಡೆದುಕೊಳ್ಳಬೇಕು. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಹೆರಿಗೆಯಂತಹ ಸಂದರ್ಭದಲ್ಲಿ ವಿಳಂಬಕ್ಕೆ ಆವಕಾಶ ಮಾಡಿಕೊಡದೇ ಸಕಾಲಕ್ಕೆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂಬುದು ಗೊತ್ತಾದಾಗ ವಿಳಂಬ ಮಾಡದೇ ಮೇಲಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕೂಡಲೇ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರು ವೈದ್ಯರು ಮತ್ತು ಸಿಬ್ಬಂದಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಹಾಗೆ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ವಿವಿಧ ಆರೋಗ್ಯ ಕ್ಷೇತ್ರಗಳ ವ್ಯೆದ್ಯಾಧಿಕಾರಿಗಳು, ತಾಯಿ ಮತ್ತು ಶಿಶು ಮರಣಕ್ಕೆ ಸಂಬಂಧಿಸಿದಂತೆ ವಿವರಣೆಯನ್ನು ನೀಡಿದರು. 10 ತಾಯಿ ಮರಣಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದರು.

ಈ ತಾಯಿ ಮರಣದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಿಗಿಂತ, ಖಾಸಗಿ ಆಸ್ಪತ್ರೆಗಳಲ್ಲಿಯೇ ತಾಯಿ ಮರಣಗಳು ಅತೀ ಹೆಚ್ಚಾಗಿ ಸಂಭವಿಸಿವೆ ಎಂಬುದರ ಬಗ್ಗೆ ವಿಶೇಷ ಗಮನ ಹರಿಸಿ ಪರಿಶೀಲನೆ ನಡೆಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಬಿ.ಜಂಬಯ್ಯ ಅವರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಸದಾಶಿವ ಪ್ರಭು ಬಿ., ಎಲ್ಲ ಕಾರ್ಯಕ್ರಮಗಳ ಅನುಷ್ಠಾಣಾಧಿಕಾರಿಗಳು, ಆಡಳಿತ ವ್ಯೆದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಮರಣ ಹೊಂದಿದ ತಾಯಂದಿರ ಕುಟುಂಬದವರು ಇದ್ದರು.