ಬೆಳೆ ಕಟಾವು ತಪ್ಪು ದತ್ತಾಂಶ ನಮೂದಿಸಿದ್ರೆ ಎಫ್ ಐ ಆರ್

| Published : Nov 29 2024, 01:02 AM IST

ಬೆಳೆ ಕಟಾವು ತಪ್ಪು ದತ್ತಾಂಶ ನಮೂದಿಸಿದ್ರೆ ಎಫ್ ಐ ಆರ್
Share this Article
  • FB
  • TW
  • Linkdin
  • Email

ಸಾರಾಂಶ

FIR if wrong data of crop harvest is entered

-ಜಿಲ್ಲಾ ಕೃಷಿ ಅಂಕಿ-ಅಂಶ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ

----

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಬೆಳೆ ಕಟಾವು ಪ್ರಯೋಗ ನಡೆಸಿ, ಉದ್ದೇಶ ಪೂರ್ವಕ ತಪ್ಪು ದತ್ತಾಂಶ ತಂತ್ರಾಂಶದಲ್ಲಿ ನಮೂದು ಮಾಡಿರುವುದು ಕಂಡು ಬಂದರೆ, ಸಂಬಂಧಿಸಿದ ಅಧಿಕಾರಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲಿ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಎರಡನೆ ತ್ರೈಮಾಸಿಕ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಬಾರಿ ಸರಿಯಾದ ಸಮಯಕ್ಕೆ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರ ಪರಿಣಾಮ, ರೈತರು ಸಮಸ್ಯೆ ಅನುಭವಿಸುವಂತಾಯಿತು. ಈ ಬಾರಿಯ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳು ನಿಗದಿತ ಸಮಯದಲ್ಲಿಯೇ ಪೂರ್ಣಗೊಳಿಸಬೇಕು. ಒಂದು ವೇಳೆ ಬೆಳೆ ಕಟಾವು ಪ್ರಯೋಗ ತಪ್ಪಿ ಹೋಗಿ, ರೈತರಿಗೆ ವಿಮೆ ಬರುವಲ್ಲಿ ತೊಂದರೆಯಾದರೆ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸಿ, ಅವರ ವೇತನದಿಂದಲೇ ವಿಮೆ ಮೊತ್ತ ಭರಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕೆಟೇಶ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಧಿಕಾರಿಗಳು ಬೆಳೆ ಕಟಾವು ಪ್ರಯೋಗಕ್ಕೆ ನಿಗದಿ ಪಡಿಸಿದ ಬೆಳೆ ಬಿತ್ತನೆಯಾಗಿಲ್ಲ ಎಂದು ಕಚೇರಿಯಲ್ಲಿಯೇ ಕೂತು ವರದಿ ನೀಡಬಾರದು. ಸ್ಥಳಕ್ಕೆ ಹೋಗಿ ವೀಕ್ಷಣೆ ನಡೆಸಬೇಕು. ಪರ್ಯಾಯ ಜಮೀನುಗಳಲ್ಲಿ ನಿಗದಿ ಪಡಿಸಿದ ಬೆಳೆ ಇದ್ದರೆ, ಅನುಮತಿ ಪಡೆದು ಬೆಳ ಕಟಾವು ಪ್ರಯೋಗ ನಡೆಸಬೇಕು. ಈ ಕುರಿತು ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಡೆಸಬೇಕು. ಬೆಳೆ ಬಿತ್ತನೆಯಾಗಿಲ್ಲ ಎಂದು ಒಂದು ವೇಳೆ ತಪ್ಪಾಗಿ ವರದಿ ನೀಡಿದರೆ, ಅಂತಹ ಅಧಿಕಾರಿಯ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸರಿಯಾದ ಸಮಯಕ್ಕೆ ಬೆಳೆ ಕಟಾವು ಪ್ರಯೋಗ ಕೈಗೊಳ್ಳದೇ, ಬೆಳೆ ಕೊಯ್ಲು ಮುಗಿದ ನಂತರ ಅದೇ ಜಮೀನನಲ್ಲಿ ಕೃತಕವಾಗಿ ಕಟಾವು ಪರೀಕ್ಷೆ ನಡೆಸಿ, ಪ್ರಯೋಗ ಅನೂರ್ಜಿತಗೊಳಿಸಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ, ಹಿರಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸಭೆಯಲ್ಲಿ ನಿರ್ದೇಶನ ನೀಡಿದರು. ಇದರೊಂದಿಗೆ ಅಂತಹ ಎಲ್ಲಾ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿದ ಅಧಿಕಾರಿಗಳಿಂದ ವಿವರಣೆ ಪಡೆದುಕೊಳ್ಳಬೇಕು, ತಹಶೀಲ್ದಾರರು ತಾಲ್ಲೂಕು ಮಟ್ಟದ ಸಮನ್ವಯ ಸಮತಿ ಸಭೆಗಳನ್ನು ನಡೆಸುವಂತೆ ಸೂಚಿಸಿದರು.

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 4,166 ಬೆಳೆ ಕಟಾವು ಪ್ರಯೋಗಗಳನ್ನು ನಿಗದಿ ಪಡಿಸಲಾಗಿದೆ. ಇದರಲ್ಲಿ 4,018 ಪ್ರಯೋಗಳನ್ನು ನಡೆಸಿ ನಮೂನೆ-1 ಭರ್ತಿ ಮಾಡಲಾಗಿದೆ. 148 ಪ್ರಯೋಗಳು ನಿಯೋಜಿಸಿದ ಅಧಿಕಾರಿಗಳು ಕೈಗೊಂಡಿಲ್ಲ. ನಮೂನೆ-2 ರಲ್ಲಿ 3,512 ಪ್ರಯೋಗಳನ್ನು ನಡೆಸಲಾಗಿದೆ. 506 ಪ್ರಯೋಗಳು ಬಾಕಿಯಿವೆ. 108 ಕಂದಾಯ, 10 ಕೃಷಿ, 28 ತೋಟಗಾರಿಕೆ ಹಾಗೂ 02 ಗ್ರಾಮೀಣಾಭಿವೃದ್ದಿ ಇಲಾಖೆಗೆ ಸಂಬಂಧಿಸಿದ ಬೆಳೆ ಕಟಾವು ಪ್ರಯೋಗದ ನಮೂನೆ-1 ಬಾಕಿ ಇವೆ. ಹಿಂಗಾರು ಹಂಗಾಮಿಗೆ 1,190 ಬೆಳ ಕಟಾವು ಪ್ರಯೋಗಳು ಜಿಲ್ಲೆಗೆ ನಿಗಿದಿಯಾಗಿದ್ದು, ಇವುಗಳನ್ನು ಇಲಾಖೆವಾರು ಹಂಚಿಕೆ ಮಾಡಿರುವುದಾಗಿ ಜಿಲ್ಲಾ ಅಂಕಿ-ಸಂಖ್ಯೆ ಸಂಗ್ರಹಣಾಧಿಕಾರಿ ರವಿಕುಮಾರ್.ಎನ್. ಸಭೆಯಲ್ಲಿ ಮಾಹಿತಿ ನೀಡಿದರು.

ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್, ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

----------

ಪೋಟೋ : ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದಲ್ಲಾ ಕೃಷಿ ಅಂಕಿ-ಅಂಶ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

----------

ಫೋಟೋ ಫೈಲ್ ನೇಮ್- 28 ಸಿಟಿಡಿ10