ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಪೀಠೋಪಕರಣ ಮಾರಾಟ ಮಳಿಗೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ಮಲ್ಲೇಶ್ವರದಲ್ಲಿ ಶುಕ್ರವಾರ ನಡೆದಿದೆ.ಮಲ್ಲೇಶ್ವರದ ದತ್ತಾತ್ರೇಯ ದೇವಾಲಯ ರಸ್ತೆಯಲ್ಲಿರುವ ‘ಅಡಿಗ ಕ್ರಿಯೇಷನ್ಸ್’ ಮಳಿಗೆಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಮಳಿಗೆಯಲ್ಲಿ ಮಲಗಿದ್ದ ಕೆಲಸಗಾರರು ಎಚ್ಚರಗೊಂಡು ಅಂಗಡಿಯಿಂದ ಹೊರಬಂದು ತಮ್ಮ ಮಾಲಿಕರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯವನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಲೀಕ ತಿಳಿಸಿದ್ದು, ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಲವು ವರ್ಷಗಳಿಂದ ದತ್ತಾತ್ರೇಯ ರಸ್ತೆಯಲ್ಲಿ ಪೀಠೋಪಕರಣ ಮಾರಾಟ ಮಳಿಗೆಯನ್ನು ಮಂಜುನಾಥ ಅಡಿಗ ನಡೆಸುತ್ತಿದ್ದು, ಈ ಮಳಿಗೆಯಲ್ಲಿ 10ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಇಲ್ಲೇ ಪೀಠೋಪಕರಣ ತಯಾರಿಕೆಯ ಕುಸುರಿ ಕೆಲಸಗಳು ನಡೆಯುತ್ತವೆ. ಹೀಗಾಗಿ ಮಳಿಗೆಯಲ್ಲಿ ರಾತ್ರಿ ವೇಳೆ ಇಬ್ಬರು ಕೆಲಸಗಾರರು ಇದ್ದರು.ಎಂದಿನಂತೆ ಅಂಗಡಿ ವಹಿವಾಟು ಮುಗಿಸಿ ರಾತ್ರಿ ಮಾಲೀಕರು ಮನೆಗೆ ಮರಳಿದ್ದಾರೆ. ನಸುಕಿನ 3 ಗಂಟೆ ಸುಮಾರಿಗೆ ಶಾರ್ಟ್ ಸಕ್ಯೂರ್ಟ್‌ನಿಂದ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿದೆ. ದಟ್ಟ ಹೊಗೆ ಪರಿಣಾಮ ಸುಟ್ಟು ವಾಸನೆ ಬಂದು ಮಲಗಿದ್ದ ಕೆಲಸಗಾರರು ಥಟ್ಟನೇ ಎಚ್ಚರಗೊಂಡಿದ್ದಾರೆ. ಕೂಡಲೇ ಮಳಿಗೆಯಿಂದ ಹೊರಬಂದು ಅವರು ಪ್ರಾಣ ಉಳಿಸಿಕೊಂಡಿದ್ದಾರೆ. ಈ ಅವಘಡ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಸತತ ಮೂರು ತಾಸುಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.