ಆಸ್ಪತ್ರೆಯಲ್ಲಿನ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದರಿಂದ ಭಾರಿ ದುರಂತ ತಪ್ಪಿದೆ.
ಹೊಸಪೇಟೆ: ನಗರದ ಬಸವೇಶ್ವರ ವೃತ್ತದಲ್ಲಿರುವ ಪುಣ್ಯಕೋಟಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಆಕಸ್ಮಿಕ ಅಗ್ನಿ ಅನಾಹುತ ನಡೆದಿದೆ. ಆಸ್ಪತ್ರೆಯಲ್ಲಿನ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಿದ್ದರಿಂದ ಭಾರಿ ದುರಂತ ತಪ್ಪಿದೆ.
ನಗರದ ಕಾಲೇಜು ರಸ್ತೆಯಲ್ಲಿನ ಬಸವೇಶ್ವರ ವೃತ್ತದಲ್ಲಿರುವ ಪುಣ್ಯಕೋಟಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ 7-30ರ ಸುಮಾರಿಗೆ ಬೆಂಕಿ ಅವಘಡ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಆಸ್ಪತ್ರೆಯ ಸಿಬ್ಬಂದಿ ರೋಗಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದಾರೆ. ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಾಲಿ ಪ್ರಮೋದ್ ಸುರೇಶ್ ಮತ್ತವರ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಮುಂದಾಗುವ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.ಆಸ್ಪತ್ರೆ ಮೂರಂಸ್ತಿನ ಕಟ್ಟಡದ ಮೇಲ್ಭಾಗದಲ್ಲಿ ಹಳೆ ಕುರ್ಚಿ, ಚೇರು, ಬೆಡ್ ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಇಡಲಾಗಿತ್ತು ಎನ್ನಲಾಗಿದೆ. ಇದರ ಜೊತೆಗೆ ಬ್ಯಾಟರಿ, ಯುಪಿಎಸ್ ಕೂಡ ಇದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಮೂರಂತಸ್ತಿನಲ್ಲಿದ್ದ ಹಳೇ ಕುರ್ಚಿ, ಟೇಬಲ್, ಬೆಡ್ ಗಳು ಸೇರಿದಂತೆ ಇನ್ನಿತರ ವಸ್ತುಗಳು ಸಂಪೂರ್ಣ ಸುಟ್ಟು ಕರಲಾಗಿವೆ.
ಹೊಸ ವರ್ಷದ ಮೊದಲ ದಿನವೇ ಸಂಭವಿಸಿದ ಈ ದುರಂತವನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕಾಲಕ್ಕೆ ಆಗಮಿಸುವ ಮೂಲಕ ಬೆಂಕಿ ನಂದಿಸಿದ್ದಾರೆ. ಪುಣ್ಯಕೋಟಿ ಆಸ್ಪತ್ರೆ ಮಾನಸಿಕ ರೋಗಿಗಳ ಆಸ್ಪತ್ರೆಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ಬೆಂಕಿ ಕಾಣಿಸಿಕೊಳ್ಳುತ್ತಲೇ ರೋಗಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದಾರೆ. ಈ ಮೂಲಕ ಭಾರಿ ದುರಂತವೊಂದು ತಪ್ಪಿದಂತಾಗಿದೆ.ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎನ್ನಲಾಗಿದೆ. ನೂರಾರು ರೋಗಿಗಳು ಸೇರುವ ಆಸ್ಪತ್ರೆಯಲ್ಲಿ ಬೆಂಕಿ ಅಪಘಾತ ಸೇರಿದಂತೆ ಯಾವುದೇ ಅನಾಹುತಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿಯೇ ಈ ದುರಂತ ಜರುಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.