- ಮುಳ್ಳುಹಂದಿ ಪಾರು । ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಡು ಭಸ್ಮ । ಬೆಂಕಿ ನಂದಿಸಲು ರೈತರ ಹರಸಾಹಸ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ನಿಲೋಗಲ್ ಗ್ರಾಮದ ಅಡಕೆ ತೋಟದಲ್ಲಿ ಶನಿವಾರ ಬೆಳಗ್ಗೆ ಒಂದೂವರೆ ವರ್ಷದ ಹೆಣ್ಣುಚಿರತೆ ಮತ್ತು ಮುಳ್ಳುಹಂದಿ ತಂತಿಬೇಲಿಗೆ ಸಿಲುಕಿವೆ. ಈ ಘಟನೆಯಲ್ಲಿ ಚಿರತೆ ಮೃತಪಟ್ಟಿದ್ದರೆ, ಮುಳ್ಳುಹಂದಿ ತಪ್ಪಿಸಿಕೊಂಡು ಹೋಗಿದೆ.ಮಾವಿನಕಟ್ಟೆ ವಲಯ ಅರಣ್ಯದ ಗುಡ್ಡದಲ್ಲಿ ಚಿರತೆ, ಕರಡಿ, ಜಿಂಕೆ, ಕಾಡುಹಂದಿ, ಮುಳ್ಳುಹಂದಿ ಮುಂತಾದ ವನ್ಯಜೀವಿಗಳಿವೆ. ಸೂಳೆಕೆರೆಯ ದಡದಲ್ಲಿರುವ ಗುಡ್ಡಗಾಡು ಪ್ರದೇಶವು ತಾಲೂಕಿನ ಬಸವಾಪಟ್ಟಣ, ಹರೋಸಾಗರ, ಹೊಸೂರು, ಕಣಿವೆ ಬಿಳಚಿ, ನಿಲೋಗಲ್ ಮುಂತಾದ ಗ್ರಾಮಗಳ ವ್ಯಾಪ್ತಿಗೆ ಒಳಪಡಲಿದೆ. ಈ ಗುಡ್ಡದಲ್ಲಿ ಬೀಳುವ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಕಾಡು ಪ್ರಾಣಿಗಳು ದಿಕ್ಕಾಪಾಲಾಗುತ್ತವೆ. ಹೀಗೆ ಸಾಗುವ ಅವುಗಳು ತೋಟ, ಜಮೀನುಗಳಿಗೆ ಹಾಕಿರುವ ರಕ್ಷಣಾ ತಂತಿಬೇಲಿಗಳಿಗೆ ಸಿಲುಕುತ್ತಿವೆ.
ಚಿರತೆ ತಂತಿಬೇಲಿಗೆ ಸಿಲುಕಿ ಕಿರುಚಾಡುತ್ತಿದ್ದ ಸದ್ದು ದೂರದ ತೋಟಗಳ ರೈತರಿಗೆ ತಿಳಿದಿದೆ. ಕೂಡಲೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಹೆಣ್ಣುಚಿರತೆಯನ್ನು ರಕ್ಷಿಸಲು ಪ್ರಯತ್ನಪಟ್ಟರು. ಆದರೆ, ಚಿರತೆ ತಪ್ಪಿಸಿಕೊಳ್ಳುವ ಭರದಲ್ಲಿ ತಂತಿ ಕೊರಳಿಗೆ ಸುತ್ತಿಕೊಂಡು ಮೃತಪಟ್ಟಿದೆ. ಅದೇ ತಂತಿಬೇಲಿಗೆ ಸಿಕ್ಕಿಕೊಂಡಿದ್ದ ಮುಳ್ಳುಹಂದಿ ಮಾತ್ರ ತಪ್ಪಿಸಿಕೊಂಡು ಓಡಿಹೋಗಿ ಪ್ರಾಣ ಉಳಿಸಿಕೊಂಡಿದೆ ಎಂದು ರೈತರು ಹೇಳುತ್ತಾರೆ.
ಚಿರತೆ ಕಿರುಚಾಟ ಕೇಳಿದ ರೈತರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಆದರೆ, ಶಿವಮೊಗ್ಗದ ವನ್ಯಜೀವಿ ವಲಯದಿಂದ ಅರಿವಳಿಕೆ ಮದ್ದು ನೀಡುವ ವೈದ್ಯರ ತಂಡ ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ಮೃತಪಟ್ಟಿತ್ತು. ಚಿರತೆಯ ಮೃತದೇಹವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
- - -(ಬಾಕ್ಸ್) * ಕರೆ ಸ್ವೀಕರಿಸದ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ
ಕಳೆದೊಂದು ವಾರದಿಂದ ಅರಶಿನಘಟ್ಟ, ರುದ್ರಾಪುರ, ಸೂಳೆಕೆರೆ, ಬಸವಾಪಟ್ಟಣ ಭಾಗದಲ್ಲಿರುವ ಅರಣ್ಯಕ್ಕೆ ಬೆಂಕಿಬಿದ್ದು ಉರಿಯುತ್ತಿದೆ. ಆದರೆ, ಯಾವ ಅಧಿಕಾರಿಗಳು ಸಹ ಕಾಡಿನ ಬೆಂಕಿಯನ್ನು ನಂದಿಸಲು ಮುಂದಾಗುತ್ತಿಲ್ಲ. ಇದರ ಪರಿಣಾಮ ಕಾಡಂಚಿನ ಪ್ರದೇಶಗಳ ತೋಟ, ಜಮೀನುಗಳಿಗೆ ಕಾಡು ಪ್ರಾಣಿಗಳು, ಪಕ್ಷಿಗಳು ನುಗ್ಗುತ್ತಿವೆ. ರೈತರು, ಕೂಲಿ ಕಾರ್ಮಿಕರು ಆತಂಕಗೊಂಡಿದ್ದಾರೆ. ಈ ಮಧ್ಯೆ ಕಾಡ್ಗಿಚ್ಚಿನಿಂದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರೇ ಕಾಡಿನ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ. ಈ ಅವ್ಯವಸ್ಥೆ, ನಿರ್ಲಕ್ಷ್ಯದ ಕುರಿತು ಉತ್ತರಿಸಬೇಕಾದ ಅರಣ್ಯ ಅಧಿಕಾರಿಗಳು ಮೌನವಾಗಿರುವುದು ಸರಿಯಲ್ಲ ಎಂದು ರೈತರಾದ ಬಸವರಾಜ್, ಸುರೇಶ್, ನಾಗೇಶ್ ಅಸಮಾಧಾನದಿಂದ ಹೇಳಿದ್ದಾರೆ. ಈ ಬಗ್ಗೆ ವಿಚಾರಿಸಲು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗೆ ಕನ್ನಡಪ್ರಭ ಶ್ರಮಿಸಿದರೂ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ.
- - --22ಕೆಸಿಎನ್‌ಜಿ1.ಜೆಪಿಜಿ: ಚನ್ನಗಿರಿ ತಾ. ನಿಲೋಗಲ್ ಬಳಿ ಜಮೀನಿನ ತಂತಿಬೇಲಿಗೆ ಸಿಲುಕಿ ಮೃತಪಟ್ಟಿರುವ ಹೆಣ್ಣುಚಿರತೆ.
-22ಕೆಸಿಎನ್‌ಜಿ2.ಜೆಪಿಜಿ: ಅರಶಿನಘಟ್ಟ ಗ್ರಾಮದ ಬಳಿ ಕಾಡಿಗೆ ಬೆಂಕಿ ಬಿದ್ದಿರುವುದು.