ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ:
ತಾಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯ ಕೃಷ್ಣ ನದಿ ತೀರದ ಘಾಳಪೂಜಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಮಲಗಿದ್ದಾಗ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರಿಗೆ ಸುಟ್ಟ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಗಳ ಪೈಕಿ ಓರ್ವನನ್ನು ವಿಜಯಪುರದ ಬಿಎಲ್ ಡಿಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 18 ವಿದ್ಯಾರ್ಥಿಗಳು ಮಲಗಿದ್ದ ವೇಳೆ ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹಾಗೂ ಹೊಗೆ ಕೊಠಡಿಯ ತುಂಬೆಲ್ಲ ವ್ಯಾಪಿಸುತ್ತಿದ್ದಂತೆ ಎಚ್ಚರಗೊಂಡ ವಿದ್ಯಾರ್ಥಿಗಳು ಹೊರ ಓಡಿ ಬಂದಿದ್ದಾರೆ. ಬಳಿಕ ವಾರ್ಡನ್ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಾರೆ. ನೀರು ಹಾಕಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತವನ್ನ ತಪ್ಪಿಸಿದ್ದಾರೆ. ಬೆಂಕಿಯಿಂದಾಗಿ ವಿದ್ಯಾರ್ಥಿಗಳ ಬುಕ್, ಹಾಸಿಗೆಗಳು ಹಾಗೂ ಕಿಡಕಿಗಳು ಸುಟ್ಟು ಹೋಗಿವೆ. ವಿದ್ಯಾರ್ಥಿಗಳಾಧ ಸಮರ್ಥ ಭಜಂತ್ರಿ ಗಂಭೀರ ಗಾಯಗೊಂಡಿದ್ದಾನೆ. ಸಾಗರ ಮಾದರ, ಮಲ್ಲಿಕಾರ್ಜುನ ಭಜಂತ್ರಿ ಇಬ್ಬರ ಮೂಗು, ಕೆನ್ನೆ, ಕಿವಿಗೆ ಬೆಂಕಿ ತಾಗಿದೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮೇಲಾಧಿಕಾರಿಗಳ ಆದೇಶದಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಮಂಗಳವಾರ ಭೇಟಿ ನೀಡಿ ಪರಿಶಿಲನೆ ನಡೆಸಿದರು.6 ತಿಂಗಳಲ್ಲಿ 2 ಬಾರಿ ಅವಘಡ, ಆಕ್ರೋಶ ಮೊರಾರ್ಜಿ ವಸತಿ ಶಾಲೆ ಉದ್ಘಾಟನೆಯಾಗಿ ಆರು ತಿಂಗಳು ಕಳೆದಿದ್ದು, ಅಷ್ಟರಲ್ಲಿ ಇದು 2ನೇ ಬಾರಿಗೆ ಸಂಭವಿಸಿದ ಬೆಂಕಿ ಅವಘಡ ಎನ್ನಲಾಗಿದೆ. ಅಗ್ನಿ ಅವಘಡ ಸಂಭವಿಸಿದ್ದರೂ ತಾಲೂಕು ಅಧಿಕಾರಿಗಳಿಗೆ ತಿಳಿಸದೆ ಮುಚ್ಚಿ ಹಾಕುವ ಪ್ರಯತ್ನಗಳು ನಡೆದಂತೆ ಕಂಡು ಬರುತ್ತಿದೆ. ಇಲ್ಲವೇ ಮೊದಲ ಘಟನೆಗೆ ಸಂಭವಿಸಿದಾಗಲೇ ಅಧಿಕಾರಿಗಳು ಎಚ್ಚರವಹಿಸಬೇಕಿತ್ತು.
ಅವ್ಯವಸ್ಥೆಯ ಆಗರ ಈ ಶಾಲೆ:ಘಾಳಪೂಜಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಲಯದ ಕೊಠಡಿಗಳಲ್ಲಿ, ಮುಖ್ಯದ್ವಾರದಲ್ಲಿ, ಊಟದ ಕೊಠಡಿಗಳಲ್ಲಿ ಅಳವಡಿಸಿದ್ದ ವಿದ್ಯುತ್ ಟ್ಯೂಬ್ ಲೈಟ್ ಗಳು ಕೇವಲ ಕೇಬಲ್ ಮೇಲೆ ನಿಂತು ಜೋತಾಡುತ್ತಿವೆ. ಶೌಚಾಲಯಗಳು ಸಂಪೂರ್ಣ ಸ್ವಚ್ಛತೆಯಿಲ್ಲದೇ ದುರ್ನಾತ ಭೀರುತ್ತಿವೆ. ವಿದ್ಯುತ್ದ್ಯು ಬೋರ್ಡ್ ಗಳು ಒಡೆದು ಹಾಳಾಗಿ ಹೋಗಿದ್ದು, ವಿದ್ಯಾರ್ಥಿಗಳಿಗೆ ಮತ್ತೆ ಎಲ್ಲಿ ಅಪಾಯ ಸಂಭವಿಸುತ್ತದೆ ಎಂಬ ಆತಂಕದಲ್ಲಿಯೇ ಇದ್ದಾರೆ. ಟೈಲ್ಸ್ ನ್ನಂತು ಯಾವಾಗ ಸ್ವಚ್ಛ ಮಾಡಿದ್ದಾರೋ, ಗಲೀಜು ಹಾಗೆಯೇ ಇದೆ. ಮಕ್ಕಳಿಗೆ ನಿತ್ಯ ನೀಡುವ ಆಹಾರವೂ ಗುಣಮಟ್ಟ ಕಳೆದುಕೊಂಡಿದೆ. ಸರಿಯಾಗಿ ಊಟ ನೀಡದ ಬಗ್ಗೆ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ವಾರ್ಡನ್ ಶಿವಲಿಂಗ ಕಾಂಬಳೆಯ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.
ಪರಸ್ಪರ ಕಚ್ಚಾಟ: ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯ ಈ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಬಳಿಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿರುವ ವೇಳೆ ಶಾಲೆಯ ಪ್ರಾಂಶುಪಾಲ ದುಂಡಪ್ಪ ವಡಜೇ ಮತ್ತು ವಾರ್ಡನ್ ಕಿತ್ತಾಡಿಕೊಂಡಿದ್ದಾರೆ. ವಸತಿ ನಿಲಯದ ಸಂಪೂರ್ಣ ಜವಾಬ್ದಾರಿ ನಿಮ್ಮ ಮೇಲಿರುತ್ತದೆ. ನಿಲಯದ ಕೊಠಡಿಗಳ ದುರಸ್ತಿ ಹಾಗೂ ಸ್ವಚ್ಛತೆ ಹಾಗೂ ಊಟದ ವ್ಯವಸ್ಥೆ ಸರಿಯಾಗಿ ನೋಡಿಕೊಳ್ಳಬೇಕಲ್ಲವೇ, ಹಿಗೇನಾ ನೀವು ಕೆಲಸ ಮಾಡುವುದು ಎಂದು ವಾರ್ಡನ್ ಶಿವಲಿಂಗ ಕಾಂಬಳೆ ಮೇಲೆ ಅಧಿಕಾರಿಗಳ ಮುಂದೆಯೇ ಪ್ರಾಂಶುಪಾಲರು ಹರಿಹಾಯ್ದರು. ಹೀಗಾಗಿ, ಇಬ್ಬರ ಮಧ್ಯೆ ಅಧಿಕಾರಿಗಳ ಮುಂದೆಯೇ ವಾಕ್ಸಮರ ನಡೆಯಿತು. ಬಳಿಕ, ಎಚ್ಚೆತ್ತ ತಹಸೀಲ್ದಾರ್ ಬಸವರಾಜ ನಾಗರಾಳ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಘಟನಾ ಸ್ಥಳಕ್ಕೆ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೋಟ್
ಈಗಾಗಲೇ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದ ಅಗ್ನಿ ಅವಘಡ ಸತ್ಯ. ಇದೊಂದು ಆಕಸ್ಮಿಕ ಘಟನೆ ಎಂಬದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ ಈ ಘಟನೆಗೆ ಕಾರಣವೇನು, ಹೇಗಾಯ್ತು ಎಂಬುದರ ಬಗ್ಗೆ ಹೆಚ್ಚಿನ ತನಿಖೆಗಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳಿಗೆ ವಾಸ್ತವ ವರದಿ ಸಲ್ಲಿಸಲಾಗುವುದು.ಉಮೇಶ ಲಮಾಣಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ