ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೂ ಬೆಂಕಿಯ ಕೆನ್ನಾಲಿಗೆಗೆ ನಿಲ್ದಾಣದ ಸಮೀಪವಿದ್ದ ನೀರು ಪೂರೈಕೆ ಮಾಡುವ ಕೊಳವೆ ಬಾವಿಯ ಪೈಪ್‌ಗಳು ಹಾಗೂ ವಿದ್ಯುತ್ ಕೇಬಲ್‌ಗಳು ಸುಟ್ಟು ಹಾನಿಯಾಗಿವೆ.

ಗದಗ: ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿರುವ ಬಯಲು ಜಾಗದಲ್ಲಿ ಬೆಳೆದಿದ್ದ ಒಣಗಿದ ಹುಲ್ಲು ಹಾಗೂ ಕಸದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಪ್ರಯಾಣಿಕರು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಆತಂಕಪಡುವಂತಾಗಿತ್ತು.

ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಯಾರೋ ಕಿಡಿಗೇಡಿಗಳು ಎಸೆದ ಬೀಡಿ ಅಥವಾ ಸಿಗರೇಟ್ ತುಂಡಿನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಈ ಭಾಗದಲ್ಲಿ ವ್ಯಾಪಕವಾಗಿ ಬೆಳೆದಿದ್ದ ಮುಳ್ಳಿನ ಕಂಟಿಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ತಗುಲಿದ ಕ್ಷಣಾರ್ಧದಲ್ಲೇ ದಟ್ಟವಾದ ಹೊಗೆ ಆವರಿಸಿತು.

​ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಸಾರಿಗೆ ಸಂಸ್ಥೆಯ ಸಿಬ್ಬಂದಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ ಪ್ರಯತ್ನ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೂ ಬೆಂಕಿಯ ಕೆನ್ನಾಲಿಗೆಗೆ ನಿಲ್ದಾಣದ ಸಮೀಪವಿದ್ದ ನೀರು ಪೂರೈಕೆ ಮಾಡುವ ಕೊಳವೆ ಬಾವಿಯ ಪೈಪ್‌ಗಳು ಹಾಗೂ ವಿದ್ಯುತ್ ಕೇಬಲ್‌ಗಳು ಸುಟ್ಟು ಹಾನಿಯಾಗಿವೆ.

ಆಕ್ರೋಶ: ​ಈ ಅವಘಡಕ್ಕೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಬೇಜವಾಬ್ದಾರಿಯೇ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆ ಕಾಪಾಡುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ವರ್ಷಗಳಿಂದ ಬೆಳೆದು ನಿಂತಿರುವ ಹುಲ್ಲು ಮತ್ತು ಮುಳ್ಳಿನ ಗಿಡಗಳನ್ನು ತೆರವುಗೊಳಿಸದ ಕಾರಣ ಬೆಂಕಿ‌ ಬೀಳುವಂತಾಗಿದೆ. ಅದರಲ್ಲೂ ಕೇಂದ್ರ ಬಸ್ ನಿಲ್ದಾಣದಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದೇ ಇರುವ ಹಿನ್ನೆಲೆ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ನಿಲ್ದಾಣದಲ್ಲಿರುವ ಶೌಚಾಲಯಗಳು ನಿರ್ವಹಣೆ ಇಲ್ಲದೇ ಗಬ್ಬೆದ್ದಿವೆ. ಇದರಿಂದಾಗಿ ಪ್ರಯಾಣಿಕರು ಬಯಲನ್ನೇ ಆಶ್ರಯಿಸುವಂತಾಗಿದೆ.

ಸುರಕ್ಷತೆಗೆ ಸಿಗಲಿ ಆದ್ಯತೆ: ​ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಜನರಿರುವಾಗಲೇ ಬೆಂಕಿ ಕಾಣಿಸಿಕೊಂಡಿದ್ದು ತುಂಬ ಭಯ ಹುಟ್ಟಿಸಿತು. ಒಂದು ವೇಳೆ ಈ ಬೆಂಕಿ ನಿಲುಗಡೆ ಮಾಡಿದ್ದ ಬಸ್‌ಗಳಿಗೆ ಹಬ್ಬಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ನಿಲ್ದಾಣದ ಆವರಣವನ್ನು ಸ್ವಚ್ಛವಾಗಿಡಲಿ. ​ಈ ಘಟನೆಯ ನಂತರವಾದರೂ ಸಾರಿಗೆ ಸಂಸ್ಥೆಯು ನಿಲ್ದಾಣದ ಆವರಣದಲ್ಲಿರುವ ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.