ಸಾರಾಂಶ
ಶ್ರೀರಂಗಪಟ್ಟಣ : ತಾಲೂಕಿನ ಕರೀಘಟ್ಟ ದೇವರ ಕಾಡು ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಸುಮಾರು 25 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
ತಾಲೂಕಿನ ಗಣಂಗೂರು ಐಬಿ ಎದುರುಗಿನ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಅರಣ್ಯ ಪ್ರದೇಶದಲ್ಲಿನ ನೀಲಗಿರಿ, ಹೊಂಗೆ, ನೇರಳೆ, ರಕ್ತ ಚಂದನ ಹಾಗೂ ಹಾವು, ಮೊಲ, ನವಿಲು ಸೇರಿ ಇತರೆ ಪ್ರಾಣಿ, ಪಕ್ಷಿಗಳು ಹಾನಿಗೊಳಗಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿದ್ದ ಬೆಟ್ಟಕ್ಕೆ ಬೆಂಕಿ ಬಿದ್ದ ಪರಿಣಾಮ ದಟ್ಟವಾದ ಹೊಗೆ ಆವರಿಸಿದೆ. ಇದರಿಂದ ಹೆದ್ದಾರಿಯಲ್ಲಿ ತೆರಳುವ ಪ್ರಯಾಣಿಕರು ತೊಂದರೆ ಪಡುವಂತಾಯಿತು. ಹೊಗೆಯಿಂದ ಸುಮಾರು ಐದಾರು ಕಿಮೀವರೆಗೆ ಮೂಗು ಮುಚ್ಚಿಕೊಂಡು ತೆರಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆರ್‌ಎಫ್‌ಒ ವಿನೋದ್ ಗೌಡ ಈ ಸಂಬಂಧ ಪ್ರತಿಕ್ರಿಯಿಸಿ, ಗುರುವಾರ ಬೆಳಗ್ಗೆ ಕಿಡಿಗೇಡಿಗಳು ಬೆಟ್ಟಕ್ಕೆ ಬೆಂಕಿ ಹಚ್ಚಿದ್ದು, ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿಯೊಂದಿಗೆ ತೆರಳಿ ಬೆಂಕಿ ನಂದಿಸಿ ನಂತರ ಹಿಂದಿರುಗಿದ್ದೆವು. ಆದರೆ, ಮತ್ತೆ ಮಧ್ಯಾಹ್ನ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದರಿಂದ ಈ ಅವಘಡ ಹೆಚ್ಚಾಗಿದೆ. ನಮ್ಮ ಇಲಾಖೆ ಸಿಬ್ಬಂದಿ ಜೊತೆಗೂಡಿ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬೆಂಕಿ ನಂದಿಸುವ ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.