ಸಾರಾಂಶ
ಶಾಂತಿ, ಸಹನೆಯಿಂದ ಕಳೆದ ೩೦ ವರ್ಷಗಳಿಂದಲೂ ಸಂಘಟನೆ ಮಾಡಿಕೊಂಡು ಬರಲಾಗುತ್ತಿದೆ. ಅಭಿಮಾನಿ ಸಂಘದ ಹೆಸರಲ್ಲಿ ನಿಯತ್ತಾಗಿ ದುಡಿಯುತ್ತಾ ಬಂದಿದ್ಧೇವೆ. ಕಳೆದ ಮೂರು ದಿನಗಳ ಹಿಂದೆ ಪುನೀತ್ ಜನ್ಮದಿನ ಕಾರ್ಯಕ್ರಮದ ನಂತರ ನಮ್ಮ ಮೇಲೆ ಮಚ್ಚನ್ನು ಮಸೆಯುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ನಗರದ ಹೃದಯ ಭಾಗದ ಎನ್‌ಆರ್ ವೃತ್ತದಲ್ಲಿರುವ ಪುನೀತ್ ರಾಜಕುಮಾರ್ ಪುತ್ಥಳಿ ಆವರಣದಲ್ಲಿ ಯಾರೋ ದುಷ್ಕರ್ಮಿಗಳು ಒಣಗಿದ ಹುಲ್ಲಿಗೆ ಬೆಂಕಿ ಹಾಕಿದ್ದು, ಅಭಿಮಾನಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ ಟ್ಯಾಂಕರ್ ಮೂಲಕ ನೀರು ಹಾಕಿ ಬೆಂಕಿ ನಂದಿಸಿ ಆಗುತ್ತಿದ್ದ ಹೆಚ್ಚಿನ ಅಪಾಯವನ್ನು ತಪ್ಪಿಸಿದರು.ಶಿವರಾಜಕುಮಾರ್ ಸಂಘದ ಅಧ್ಯಕ್ಷ ರತೀಶ್ ಮಾಧ್ಯಮದೊಂದಿಗೆ ಮಾತನಾಡಿ, ಪುನೀತ್ ರಾಜಕುಮಾರ್ ಪ್ರತಿಮೆ ಮುಂದೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದು, ಇನ್ನು ಪುನೀತ್ ಹುಟ್ಟು ಹಬ್ಬದ ದಿನದಂದು ಮುಂದಿನ ಗೇಟ್ ಬೀಗ ಒಡೆದಿದ್ದಾರೆ. ನೀರಿನ ಫೌಂಟೇನ್ ಮೋಟರ್ ಕಳವು ಮಾಡಿದ್ದಾರೆ. ಇದನ್ನು ಯಾರು ಕೃತ್ಯ ಮಾಡಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಈ ಬಗ್ಗೆ ಪೊಲೀಸರಿಗೆ ಆಗಲೇ ಮನವಿ ಮಾಡಲಾಗಿದ್ದು, ಈ ವೃತ್ತದಲ್ಲಿರುವ ಸಿಸಿ ಕ್ಯಾಮರಾ ಮತ್ತು ಎಸ್.ಬಿಐ ಮುಖ್ಯ ಕಚೇರಿ ಮುಂಭಾಗ ಅಳವಡಿಸಲಾಗಿರುವ ಸಿಸಿ ಕ್ಯಾಮರಾದ ರೆಕಾರ್ಡ್‌ನ್ನು ತೆಗೆಸಿ ಪರಿಶೀಲಿಸಲಾಗುವುದು. ಈ ಕೃತ್ಯದಲ್ಲಿ ಯಾರೇ ಇದ್ದರೂ ಕ್ರಮಕೈಗೊಳ್ಳಲಾಗುವುದು.ನಾವಂತೂ ಈ ಬಗ್ಗೆ ಸುಮ್ಮನೆ ಇರುವವರಲ್ಲ ಎಂದರು.
ಅಭಿಮಾನಿ ಸಂಘದ ಅಧ್ಯಕ್ಷ ಕುಮಾರ್ ಮಹಾಂತೇಶ್ ಮಾತನಾಡಿ, ಶಾಂತಿ, ಸಹನೆಯಿಂದ ಕಳೆದ ೩೦ ವರ್ಷಗಳಿಂದಲೂ ಸಂಘಟನೆ ಮಾಡಿಕೊಂಡು ಬರಲಾಗುತ್ತಿದೆ. ಅಭಿಮಾನಿ ಸಂಘದ ಹೆಸರಲ್ಲಿ ನಿಯತ್ತಾಗಿ ದುಡಿಯುತ್ತಾ ಬಂದಿದ್ಧೇವೆ. ಕಳೆದ ಮೂರು ದಿನಗಳ ಹಿಂದೆ ಪುನೀತ್ ಜನ್ಮದಿನ ಕಾರ್ಯಕ್ರಮದ ನಂತರ ನಮ್ಮ ಮೇಲೆ ಮಚ್ಚನ್ನು ಮಸೆಯುತ್ತಿದ್ದಾರೆ. ನಾವು ಕೂಡ ಶಾಂತಿಯಿಂದ ಇದ್ದೇವೆ. ಸಿಸಿ ಕ್ಯಾಮರಾದ ರೆಕಾರ್ಡ್ ಬಂದ ಮೇಲೆ ಸತ್ಯಾಂಶ ತಿಳಿಯಲಿದೆ. ಈ ಬಗ್ಗೆ ಡೀಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.