ಸಾರಾಂಶ
ಗದಗ: ಅಗ್ನಿ ಅನಾಹುತ ತಡೆಗಟ್ಟುವ ದಿನಾಚರಣೆ ಅಂಗವಾಗಿ ಗದಗ ಅಗ್ನಿಶಾಮಕ ಠಾಣೆ ಸಿಬ್ಬಂದಿ ತಾಲೂಕಿನ ಹುಲಕೋಟಿಯ ಕೆ.ಎಚ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಗ್ನಿ ಅವಘಡ ಪರಿಸ್ಥಿತಿಯನ್ನು ತ್ವರಿತವಾಗಿ ನಿಭಾಯಿಸುವುದರ ಜತೆಗೆ ಅಗ್ನಿ ಸುರಕ್ಷತೆಯ ಬಗ್ಗೆ ಆಸ್ಪತ್ರೆ ಸಿಬ್ಬಂದಿಗೆ ಅಣಕು ಪ್ರದರ್ಶನ ಮೂಲಕ ಅರಿವು ಮೂಡಿಸಿದರು.ವಿವಿಧ ವಸ್ತುಗಳಿಗೆ ತಗುಲಿದ ಬೆಂಕಿಯನ್ನು ನೀರು ಬಳಸಿ ಆರಿಸಿದರು. ಜತೆಗೆ ಬೆಂಕಿ ನಿರೋಧಕ ಸಿಲಿಂಡರ್ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ಗದಗ ಅಗ್ನಿಶಾಮಕ ಠಾಣೆಯ ವಿ.ಎಸ್. ಟಕ್ಕೇಕರ ಮಾತನಾಡಿ, ಅಗ್ನಿ ಅವಘಡಗಳು ಸಂಭವಿಸಿದರೆ ಪ್ರಾಥಮಿಕವಾಗಿ ಬೆಂಕಿ ನಂದಿಸಲು ಅನುಕೂಲವಾಗುವಂತೆ ಪ್ರತಿಯೊಂದು ಆಸ್ಪತ್ರೆಯಲ್ಲೂ ಅಗ್ನಿನಂದಕಗಳನ್ನು ಅಳವಡಿಸಿಕೊಳ್ಳಬೇಕು. ಜತೆಗೆ ಅವುಗಳನ್ನು ಬಳಸುವುದು ಹೇಗೆ ಎಂಬ ಅರಿವು ಹೊಂದುವುದು ಕೂಡ ಅಷ್ಟೇ ಮುಖ್ಯ ಎಂದರು.ಆಸ್ಪತ್ರೆಗಳಲ್ಲಿ ಅಗ್ನಿ ಅವಘಡಗಳು ನಡೆದರೆ ಅಪಾಯ ತಡೆಗಟ್ಟುವುದು ಹೇಗೆ ? ಅಗ್ನಿ ಅವಘಡಗಳು ಆಗದಂತೆ ಮುಂಜಾಗ್ರತಾ ಕ್ರಮವಹಿಸುವುದು ಹೇಗೆ ಎಂಬುದರ ಬಗ್ಗೆ ವಿವರಿಸಿದರು.ಕೆ.ಎಚ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ನಾಗನೂರ ಮಾತನಾಡಿ, ಅಗ್ನಿ ಅವಘಡಗಳು ನಡೆದಾಗ ಅದನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅಗ್ನಿಶಾಮಕ ಠಾಣೆ ಸಿಬ್ಬಂದಿ ಪರಿಣಾಮಕಾರಿಯಾಗಿ ತಿಳಿಸಿಕೊಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಅಗ್ನಿನಂದಕಗಳ ಬಳಕೆ ಬಗ್ಗೆ ತಿಳಿದುಕೊಳ್ಳಬೇಕು. ಜತೆಗೆ ಅಗ್ನಿ ಅವಘಡಗಳು ಸಂಭವಿಸದಂತೆ ಆಸ್ಪತ್ರೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು ಎಂದರು.ಅಗ್ನಿಶಾಮಕ ಠಾಣೆಯ ಚಾಲಕ ಎಂ.ಐ. ದೊಡ್ಡಮನಿ, ಸಿಬ್ಬಂದಿಯಾದ ಎಸ್.ಆರ್. ದೇಸಾಯಿ, ವಿ.ಪಿ. ಹುಲಕೋಟಿ, ರವಿ ಶಿವಸಿಂಪಿಗಿ ಹಾಗೂ ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.