ಸಾರಾಂಶ
ರೈತರು ವರ್ಷಪೂರ್ತಿ ತಮ್ಮ ಸಂಗಾತಿ ಎತ್ತು ಹಾಗೂ ದನಕರುಗಳಿಗೆ ಬೇಕಾಗುವಷ್ಟು ಹೊಟ್ಟನ್ನು ಸಂಗ್ರಹಣೆ ಮಾಡಿಟ್ಟುಕೊಂಡಿದ್ದರು. ಆಕಸ್ಮಿಕವಾಗಿ ಬಣವೆಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ
ಶಿರಹಟ್ಟಿ: ತಾಲೂಕಿನ ಚೌಡಾಳ ಗ್ರಾಮದ ಜಮೀನಿನಲ್ಲಿದ್ದ ಮೆಕ್ಕೆ ಜೋಳ ಹೊಟ್ಟು, ಶೇಂಗಾ ಹೊಟ್ಟು, ತೊಗರಿ, ಮೆಕ್ಕೆ ಜೋಳದ ತೆನೆ ಸೇರಿದಂತೆ ೨೨ಕ್ಕೂ ಹೆಚ್ಚು ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಹೊಟ್ಟಿನ ಬಣವೆಗಳು ಭಸ್ಮವಾಗಿ ಅಂದಾಜು ₹೩ಲಕ್ಷಕ್ಕೂ ಹೆಚ್ಚು ಹಾನಿಯಾದ ಘಟನೆ ಜರುಗಿದೆ.
ಹಾನಿಗೀಡಾದ ಸ್ಥಳಕ್ಕೆ ಶಾಸಕ ಡಾ.ಚಂದ್ರು ಲಮಾಣಿ, ತಹಸೀಲ್ದಾರ್ ಅನಿಲ ಬಡಿಗೇರ ಕೃಷಿ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಂತರ ಮಾತನಾಡಿದ ಶಾಸಕ ಡಾ.ಚಂದ್ರು ಲಮಾಣಿ, ರೈತರು ವರ್ಷಪೂರ್ತಿ ತಮ್ಮ ಸಂಗಾತಿ ಎತ್ತು ಹಾಗೂ ದನಕರುಗಳಿಗೆ ಬೇಕಾಗುವಷ್ಟು ಹೊಟ್ಟನ್ನು ಸಂಗ್ರಹಣೆ ಮಾಡಿಟ್ಟುಕೊಂಡಿದ್ದರು. ಆಕಸ್ಮಿಕವಾಗಿ ಬಣವೆಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಅತಿವೃಷ್ಟಿ, ಅನಾವೃಷ್ಟಿ, ಬರದ ಛಾಯೆ ಬಂದ ಫಸಲಿಗೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ರೈತಾಪಿ ವರ್ಗ ಕೃಷಿಯಿಂದ ಬೇಸತ್ತು ಹೋಗಿರುವ ಇಂದಿನ ಪರಿಸ್ಥಿತಿಯಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ರೈತರಿಗೆ ಎದುರಾಗಿದ್ದು, ಸಂಪೂರ್ಣ ರೈತಾಪಿ ವರ್ಗ ಸಂಕಷ್ಟದಲ್ಲಿದೆ. ರೈತರ ನೆರವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಧೈರ್ಯ ತುಂಬಿದರು.ಸಧ್ಯ ರೈತರ ಸಂಕಷ್ಟ ಹೇಳ ತೀರದಾಗಿದೆ. ವರ್ಷಪೂರ್ತಿ ಜಾನುವಾರುಗಳ ಸಂರಕ್ಷಣೆ ಹೇಗೆ ಮಾಡುವುದು ಎಂಬ ಚಿಂತೆಯಲ್ಲಿ ರೈತರು ದಿನ ದೂಡುತ್ತಿದ್ದಾರೆ. ಆದಷ್ಟು ಬೇಗ ಸರ್ಕಾರದ ಗಮನ ಸೆಳೆದು ಹಾನಿಯಾದ ರೈತರಿಗೆ ಯೋಗ್ಯ ಪರಿಹಾರ ಕೊಡಿಸಲು ಶ್ರಮಿಸುವುದಾಗಿ ಹೇಳಿದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮದ ನೂರಾರು ಜನ ರೈತರು ಹಾಗೂ ಕೃಷಿ ಇಲಾಕೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.