ಸಾರಾಂಶ
ಪ್ರಯಾಣಿಕರನ್ನು ಬೇರೊಂದು ಬಸ್ಸಿನಲ್ಲಿ ಕಳುಹಿಸಲಾಯಿತು. ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಿಯಂತ್ರಿಸಿ ಹೆಚ್ಚಿನ ಅವಘಡ ತಪ್ಪಿಸಲಾಗಿದೆ.
ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ಸೊಂದರಲ್ಲಿ ಬೆಂಕಿ ಕಾಣಸಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದ್ದ ಬಸ್ಸಿನ ಪ್ರಯಾಣಿಕರನ್ನು ರಕ್ಷಿಸಿರುವ ಘಟನೆ ಗುರುವಾರ ಇಲ್ಲಿನ ಹಳೆಗೇಟು ಬಳಿ ನಡೆದಿದೆ.
ಪ್ರಯಾಣಿಕರನ್ನು ಬೇರೊಂದು ಬಸ್ಸಿನಲ್ಲಿ ಕಳುಹಿಸಲಾಯಿತು. ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಿಯಂತ್ರಿಸಿ ಹೆಚ್ಚಿನ ಅವಘಡ ತಪ್ಪಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ಬರುತ್ತಿದ್ದ ಬಸ್‌ನ ಹಿಂಬದಿಯಲ್ಲಿದ್ದ ಹವಾ ನಿಯಂತ್ರಿತ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿ ಬೆಂಕಿ ಮೂಡಿತ್ತು. ಬಸ್‌ನ ಹಿಂಬದಿಯಿಂದ ಹೊಗೆ ಬರುವುದನ್ನು ಕಂಡು ಚಾಲಕ ಬಸ್ಸನ್ನು ತಕ್ಷಣವೇ ನಿಲ್ಲಿಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಇಳಿಯುವಂತೆ ವಿನಂತಿಸಿದ್ದಾರೆ. ಪ್ರಯಾಣಿಕರೆಲ್ಲರನ್ನೂ ಸುರಕ್ಷಿತವಾಗಿ ಇಳಿಸಿದ ಬಳಿಕ ಪರಿಶೀಲಿಸುವ ಸಲುವಾಗಿ ಹವಾ ನಿಯಂತ್ರಿತ ವ್ಯವಸ್ಥೆಯ ಬಾಗಿಲು ತೆಗೆದಾಗ ಅದರೊಳಗೆ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಗುಂಡಿಯಲ್ಲಿ ನಿಂತಿದ್ದ ನೀರು ಬಳಕೆ: ಕೂಡಲೇ ಬಸ್ ಚಾಲಕ, ನಿರ್ವಾಹಕ, ಹಾಗೂ ಸ್ಥಳೀಯರು ರಸ್ತೆ ಬದಿಯ ಗುಂಡಿಯಲ್ಲಿ ಸಂಗ್ರಹವಾಗಿದ್ದ ಮಳೆ ನೀರನ್ನೇ ಬಳಸಿ ಬೆಂಕಿ ನಂದಿಸಲು ಶ್ರಮಿಸಿ ಯಶಸ್ವಿಯಾದರು. ಬೆಂಕಿಯಿಂದಾಗಿ ಬಸ್‌ನ ಎಸಿ ಕಂಪ್ರೆಸರ್ ಹಾಗೂ ಹಿಂಬದಿಗೆ ಹಾನಿಯಾಗಿದೆ. ಬಹಳಷ್ಟು ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳೀಯರ ಎಚ್ಚರಿಕೆ ಸಂದೇಶ: ಸ್ಥಳೀಯರಾದ ಝಕಾರಿಯಾ, ಜಾಯಿ, ಇಕ್ಬಾಲ್ ಮತ್ತಿತರ ಯುವಕರು ನದಿ ನೀರ ಮಟ್ಟ ನೋಡುವ ಸಲುವಾಗಿ ಹೆದ್ದಾರಿ ಪಾರ್ಶ್ವದ ನೇತ್ರಾವತಿ ನದಿ ದಡದಲ್ಲಿ ನಿಂತಿದ್ದರು. ಬಸ್‌ನ ಹೊರ ಭಾಗದಲ್ಲಿ ಹೊಗೆ ಕಾಣಿಸಿಕೊಂಡದನ್ನು ನೋಡಿ ಬಸ್ಸಿನ ಚಾಲಕನಿಗೆ ಅಪಾಯದ ಸಂಜ್ಞೆ ನೀಡಿದರು. ಯುವಕರ ಸಂಜ್ಞೆಯನ್ನು ಗಮನಿಸಿ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರನ್ನು ತಕ್ಷಣವೇ ಇಳಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದರು. ಇದೇ ಯುವಕರು ರಸ್ತೆಯಲ್ಲಿನ ಹೊಂಡ ಗುಂಡಿಗಳಲ್ಲಿ ಶೇಖರವಾಗಿದ್ದ ಮಳೆ ನೀರನ್ನೇ ಬಳಸಿ ಬೆಂಕಿ ನಂದಿಸುವಲ್ಲಿ ಸಹಕಾರಿಯಾಗುವ ಮೂಲಕ ಗಮನ ಸೆಳೆದರು.