ಅಂಕೋಲಾ: ತಾಲೂಕಿನ ತೆಂಕಣಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಎರಡು ಕೊಠಡಿಗಳು ಸಂಪೂರ್ಣ ಸುಟ್ಟು 50 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ.
ಬುಧವಾರ ಮಧ್ಯರಾತ್ರಿ ಈ ದುರಂತ ಸಂಭವಿಸಿದ್ದು ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.ಮಧ್ಯರಾತ್ರಿ 1.30 ಕ್ಕೆ ಎದ್ದ ಬೆಂಕಿಯ ಕೆನ್ನಾಲಿಗೆಗೆ ಒಂದು ಕೊಠಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು ಇನ್ನೊಂದು ಕೊಠಡಿಗೆ ಭಾಗಶಃ ಹಾನಿಯಾಗಿದೆ.
ಕೊಠಡಿ ಒಳಗಿದ್ದ 5 ಲಕ್ಷ ರೂ. ಮೌಲ್ಯದ ಸ್ಮಾರ್ಟ್ ಟಿವಿ ಆಟದ ಮತ್ತು ವ್ಯಾಯಾಮ ಸಲಕರಣಗಳು, ಬ್ಯಾಂಡ್ ಸೆಟ್, ಪುಸ್ತಕಗಳು, ಪಂಪ್ ಸೆಟ್ ಎಲ್ಲವೂ ಸಂಪೂರ್ಣ ಸುಟ್ಟು ಕರಕಲಾಗಿದೆ.ಸ್ಥಳೀಯರು, ಸಾರ್ವಜನಿಕರು ಮತ್ತು ಅಗ್ನಿಶಾಮಕ ದಳ ಹೋರಾಡಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
5ನೇ ವರ್ಗದ ಕೋಣೆಯಾಗಿದ್ದು ಕೋಣೆಯ ಇನ್ನೊಂದು ಪಕ್ಕದಲ್ಲಿ ಬ್ಯಾಂಡ್ ಸೆಟ್, ಕ್ರೀಡಾ ಸಾಮಗ್ರಿ, ಕಾಗದ ಪತ್ರಗಳ ಕಪಾಟು ಇನ್ನಿತರ ಸಾಮಗ್ರಿಗಳನ್ನು ಇಡಲಾಗಿತ್ತು. ದಸರಾ ರಜೆಯ ನಂತರ ಗುರುವಾರ ಬೆಳಿಗ್ಗೆಯಿಂದಲೇ ಶಾಲೆಗಳು ಪ್ರಾರಂಭವಾಗಬೇಕಾಗಿದ್ದು ಬುಧವಾರ ಮಧ್ಯ ರಾತ್ರಿ ವೇಳೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಸಾರ್ವಜನಿಕರ ಸಹಕಾರದಿಂದ ಬೆಂಕಿ ಪಕ್ಕದ ಕೊಠಡಿಗಳಿಗೆ ಹರಡದಂತೆ ತಡೆಯಲಾಯಿತು. ಒಂದು ವರ್ಗಕೋಣೆ ಹಾಗೂ ಅದರಲ್ಲಿರುವ ಸಾಮಗ್ರಿಗಳು ಸಂಪೂರ್ಣ ಸುಟ್ಟು ಹೋಗಿದೆ.
ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್ ಸರ್ಕಿಟ್ ಇರಬಹುದೆಂದು ಅಂದಾಜಿಸಲಾಗಿದ್ದು ನಿಖರವಾದ ಕಾರಣ ತಿಳಿದು ಬರಬೇಕಾಗಿದೆ ಎಂದು ಮುಖ್ಯಾಧ್ಯಾಪಕ ಅರುಣ ಶೆಡಗೇರಿ ತಿಳಿಸಿದ್ದಾರೆ.ಸ್ಥಳಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಅಗ್ನಿಶಾಮಕ ದಳದ ಠಾಣಾಧಿಕಾರಿ ರಾಜೇಶ್ ನಾಯಕ್ ಮತ್ತು ಅಗ್ನಿಶಾಮಕರು, ಹೆಸ್ಕಾಂ ಇಲಾಖೆ ಅಧಿಕಾರಿಗಳು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ, ವಿನೋದ್ ಬಾಸಗೋಡ್ ಸ್ಥಳೀಯ ಪ್ರಮುಖರಾದ ರಾಜೇಶ ಮಿತ್ರಾ ನಾಯ್ಕ ಇನ್ನಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
