ಬೆಂಕಿ ಸುಲಭ; ದೀಪ ಹಚ್ಚುವುದು ಕಷ್ಟ

| Published : Nov 04 2024, 12:23 AM IST / Updated: Nov 04 2024, 12:24 AM IST

ಸಾರಾಂಶ

ನಮ್ಮ ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ; ದೀಪ ಹಚ್ಚುವುದು ಬಹಳ ಕಷ್ಟ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ನಮ್ಮ ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ; ದೀಪ ಹಚ್ಚುವುದು ಬಹಳ ಕಷ್ಟ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ದೀಪಾವಳಿ ಪ್ರಯುಕ್ತ ಮಠದಲ್ಲಿ ಆಯೋಜಿಸಿದ್ದ ದೀಪಾವಳಿ ಆಚರಣೆಯಲ್ಲಿ ಹಿರಿಯ ಶ್ರೀಗಳ ಐಕ್ಯಮಂಟಪದ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ದೀಪಾವಳಿ ಹಬ್ಬ ಬಂತೆಂದರೆ ಭಾರತೀಯರಿಗೆ ಎಲ್ಲಿಲ್ಲದ ಸಂಭ್ರಮ ಹಾಗೂ ಸಡಗರ. ಸಹಸ್ರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಈ ದೀಪಾವಳಿ ಇಂದು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ ಹೆಚ್ಚು ಸಾಂಸ್ಕೃತಿಕ ಆಚರಣೆಯಾಗಿ ಪರಿಣಮಿಸಿ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಭಾರತೀಯರು ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ಮನೆಗಳಲ್ಲಿ ದೀಪಾಲಂಕಾರ ಮಾಡಿದರೆ ನಭೋಮಂಡಲದಲ್ಲಿ ಮಿನುಗುವ ಗ್ರಹನಕ್ಷತ್ರಗಳು ನಿತ್ಯವೂ ದೀಪಾವಳಿಯ ಸಡಗರದಲ್ಲಿರುವಂತೆ ತೋರುತ್ತವೆ ಎಂದು ಅಭಿಪ್ರಾಯಪಟ್ಟರು.ಬೆಳಕು ಜ್ಞಾನದ ಸಂಕೇತ; ಕತ್ತಲು ಅಜ್ಞಾನದ ಸಂಕೇತ. “ತಮಸೋ ಮಾ ಜ್ಯೋತಿರ್ಗಮಯ” ಎಂದು ಶತಮಾನಗಳಿಂದ ಹೇಳುತ್ತಲೇ ಬಂದಿದ್ದೇವೆ. ನಮ್ಮ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಲಿಲ್ಲ. ಬದುಕು ಕತ್ತಲಿನಿಂದ ಬೆಳಕಿತ್ತ ಸಾಗಲಿಲ್ಲ ಎಂದರು.ಸಭೆ ಸಮಾರಂಭಗಳಲ್ಲಿ ಸುಲಭವಾಗಿ ದೀಪ ಹಚ್ಚಲು ಪ್ರತಿಯೊಂದು ಬತ್ತಿಯ ಮೇಲೆ ಕರ್ಪೂರದ ಬಿಲ್ಲೆ ಇಡುವ ಪದ್ಧತಿಯನ್ನು ರೂಢಿಗೆ ಬಂದಿದೆ. ಆದರೂ ಉದ್ಘಾಟಕರು ದೀಪ ಹಚ್ಚಿದ ಕೆಲವೇ ಕಾಲದಲ್ಲಿ ಹಚ್ಚಿದ ದೀಪ ಆರಿ ಮಂಕು ಕವಿದಿರುತ್ತದೆ. ಇದು ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಸಂಕೇತವಾಗುವುದರ ಬದಲು ಬೆಳಕಿನಿಂದ ಕತ್ತಲೆಯ ಕಡೆಗೆ ಧಾವಿಸುತ್ತಿರುವುದರ ಸಂಕೇತವಾಗಿದೆ. ನಮ್ಮ ಜನನಾಯಕರು ವೇದಿಕೆಯ ಮೇಲೆ ದೀಪ ಹಚ್ಚುವುದಕ್ಕಿಂತ ತಮ್ಮ ಭಾಷಣಗಳಲ್ಲಿ ಪಟಾಕಿ ಸಿಡಿಸುವುದೇ ಜಾಸ್ತಿಯಾಗಿರುವ ನಿದರ್ಶನಗಳು ಇವೆ. ಅನೇಕ ದೀಪಾವಳಿಗಳು ಬಂದು ಹೋಗಿವೆ. ಆದರೂ ಮನುಷ್ಯನ ಹೃದಯ ಮಾತ್ರ ಇನ್ನೂ ಕಗ್ಗತ್ತಲ ಕೋಣೆಯಾಗಿಯೇ ಉಳಿದಿದೆ ಎಂದರು. ಇಂತಹ ಹಬ್ಬಗಳಂದು ಪುರಾಣ ಕಾಲದಲ್ಲಿದ್ದ ನರಕಾಸುರ, ತಾರಕಾಸುರ, ರಾವಣಾಸುರ ಇತ್ಯಾದಿ ರಾಕ್ಷಸರ ವಧೆಯಾಯಿತೆಂದು ತಿಳಿಯದೆ ಅವರೆಲ್ಲರೂ ನಮ್ಮೊಳಗೇ ಇನ್ನೂ ಜೀವಂತವಾಗಿದ್ದಾರೆಂದು ಭಾವಿಸಿ ನಮ್ಮೊಳಗಿರುವ ರಾಕ್ಷಸೀ ಗುಣಗಳನ್ನು ನಿರ್ಮೂಲನಗೊಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಈ ಹಬ್ಬಗಳು ಸಾರ್ಥಕವಾಗಬಹುದು ಎಂದು ಶ್ರೀಗಳು ತಿಳಿಸಿದರು.ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.‌ ಮರುಳಸಿದ್ಧಯ್ಯ, ಎಚ್.ಬಿ. ಕರಿಬಸಪ್ಪ, ಸಿ.ಆರ್.‌ ನಾಗರಾಜ್‌, ಕೆ.ಇ. ಬಸವರಾಜ್‌, ಕೆ.ಬಿ. ಮೋಹನ್‌ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ನಮ್ಮ ಜನನಾಯಕರು ವೇದಿಕೆಯ ಮೇಲೆ ದೀಪ ಹಚ್ಚುವುದಕ್ಕಿಂತ ತಮ್ಮ ಭಾಷಣಗಳ ಮೂಲಕ ಪಟಾಕಿ ಸಿಡಿಸುವುದೇ ಹೆಚ್ಚು. ಅನೇಕ ದೀಪಾವಳಿಗಳು ಬಂದು ಹೋಗಿವೆ. ಆದರೂ ಮನುಷ್ಯನ ಹೃದಯ ಮಾತ್ರ ಇನ್ನೂ ಕಗ್ಗತ್ತಲ ಕೋಣೆಯಾಗಿಯೇ ಉಳಿದಿದೆ.

ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ತರಳಬಾಳು ಜಗದ್ಗುರು ಮಠ