ತೋಟಕ್ಕೆ ಕಿಡಿಗೇಡಿಗಳಿಂದ ಬೆಂಕಿ, ಗಿಡ ಮರಗಳು, ನಾಶ

| Published : Mar 24 2024, 01:37 AM IST

ಸಾರಾಂಶ

ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಕೆಲವೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ತೋಟವನ್ನು ಆವರಿಸಿಕೊಂಡು ಗಿಡ, ಮರ ಹಾಗೂ ಹನಿ ನೀರಾವರಿ ಪೈಪ್‌ಗಳು ಸುಟ್ಟು ಹೋಗಿವೆ. ಸಂಜೆ ವೇಳೆಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಮಾರಸ್ವಾಮಿ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಎಲ್ಲವೂ ನಾಶವಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತೆಂಗು, ಬಾಳೆ ಮತ್ತು ಅಡಿಕೆ ಮರಗಳಿಂದ ಕೂಡಿದ್ದ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಬೆಳೆದು ನಿಂತಿದ್ದ ಗಿಡ - ಮರಗಳು, ಹನಿ ನೀರಾವರಿ ಪೈಪ್‌ಗಳು ಸುಟ್ಟು ಭಸ್ಮವಾಗಿ ಲಕ್ಷಾಂತರ ಮೌಲ್ಯದ ಹಾನಿಯಾಗಿರುವ ಘಟನೆ ತಾಲೂಕಿನ ಸಾತೇನಹಳ್ಳಿಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಗ್ರಾಮದ ಪ್ರಗತಿಪರ ರೈತ ಕುಮಾರಸ್ವಾಮಿ ಅವರ ಜಮೀನಿನ ಗ್ರಾಮದ ಹೊರವಲಯದ 1 ಕಿಮೀ. ದೂರದಲ್ಲಿರುವ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಕೆಲವೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ತೋಟವನ್ನು ಆವರಿಸಿಕೊಂಡು ಗಿಡ, ಮರ ಹಾಗೂ ಹನಿ ನೀರಾವರಿ ಪೈಪ್‌ಗಳು ಸುಟ್ಟು ಹೋಗಿವೆ. ಸಂಜೆ ವೇಳೆಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಮಾರಸ್ವಾಮಿ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಎಲ್ಲವೂ ನಾಶವಾಗಿದೆ.

ತಮಗಿರುವ ಒಂದೂ ಮುಕ್ಕಾಲು ಎಕರೆ ಕೃಷಿ ಜಮೀನಿನಲ್ಲಿ 100 ತೆಂಗಿನ ಮರಗಳಿವೆ. ಇದಲ್ಲದೆ 1 ಸಾವಿರ ಬಾಳೆ ಗಿಡ ಹಾಗೂ 200 ಅಡಿಕೆ ಮರಗಳು ಬೆಳೆಯುತ್ತಿದ್ದವು. ಬೇಸಾಯಕ್ಕೆಂದು 2.5 ಲಕ್ಷ ರು. ಖರ್ಚು ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬರಗಾಲದ ನಡುವೆಯೂ ಬೋರ್‌ವೆಲ್‌ನಲ್ಲಿ ನೀರಿನ ಕೊರತೆ ಇರಲಿಲ್ಲ. ಪ್ರತಿದಿನ ಹನಿ ನೀರಾವರಿ ಪದ್ಧತಿ ಮೂಲಕ ನೀರು ಹಾಯಿಸುತ್ತಿದ್ದರಿಂದ ಗಿಡ ಮತ್ತು ಮರಗಳು ಕೂಡ ಚೆನ್ನಾಗಿ ಬೆಳೆಯುತ್ತಿದ್ದವು. ಉಳುಮೆ ಮಾಡುವ ಬದಲು ಕಳೆ ಸಹಿತ ಗಿಡಗಳನ್ನು ಭೂಮಿಯಲ್ಲಿಯೇ ಕೊಳೆಸಿ ಗೊಬ್ಬರ ಮಾಡುತ್ತಿದ್ದೆ. ಶನಿವಾರ ಮಧ್ಯಾಹ್ನ ಯಾರೋ ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕೃಷಿಯಲ್ಲಿ ಹೊಸ ವಿಧಾನ ಅಳವಡಿಸಿಕೊಂಡಿದ್ದ ನಾನು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ತೆರಳಿ ರೈತರಿಗೆ ಸೂಕ್ತ ಸಲಹೆ ನೀಡುತ್ತಿದ್ದೆ. ನಮ್ಮ ಜಮೀನಿಗೆ ಬಂದವರಿಗೂ ಅಗತ್ಯ ಮಾಹಿತಿ ಕೊಡುತ್ತಿದ್ದೆ. ನಮ್ಮ ಪಾಡಿಗೆ ಕೃಷಿ ಮಾಡಿಕೊಂಡು ನೆಮ್ಮದಿ ಜೀವನ ಕಟ್ಟಿಕೊಂಡಿರುವ ನಮ್ಮ ಕುಟುಂಬಕ್ಕೆ ಈ ಬೆಂಕಿ ಅವಘಡದಿಂದ ದಿಕ್ಕು ತೋಚದಂತಾಗಿದೆ ಎಂದು ನೊಂದು ಹೇಳಿದ್ದಾರೆ.‘ನಾವು ಯಾರ ವಿಷಯಕ್ಕೂ ಹೋಗುವುದಿಲ್ಲ. ಆದರೂ ನಮ್ಮ ಮೇಲೆ ಯಾರಿಗೆ ದ್ವೇಷವಿದೆಯೋ ಗೊತ್ತಿಲ್ಲ. ಕಳೆದ ವರ್ಷವು ಇದೇ ರೀತಿ ಬೆಂಕಿ ಹಾಕಿದ್ದ ಸಂದರ್ಭದಲ್ಲಿ ತಕ್ಷಣ ಕ್ರಮವಹಿಸಿದ್ದರಿಂದ ಹೆಚ್ಚು ಅವಘಡ ಸಂಭವಿಸಿರಲಿಲ್ಲ. ಈಗ ಎಲ್ಲವೂ ನಾಶವಾಗಿರುವುದರಿಂದ ಬಹಳ ನೋವಾಗಿದೆ. ಕಿಡಿಗೇಡಿಗಳು ನಮ್ಮ ತೋಟಕ್ಕೆ ಬೆಂಕಿ ಹಾಕಿರುವ ಕುರಿತು ಭಾನುವಾರ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು.’

ಕುಮಾರಸ್ವಾಮಿ, ಪ್ರಗತಿಪರ ರೈತ, ಸಾತೇನಹಳ್ಳಿ.