ಸಾರಾಂಶ
- ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ಗೆ ಸಂಸದ ಸಿದ್ದೇಶ್ವರ ತಾಕೀತು- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಿಮ್ಮ ಕಲ್ಲೇಶ್ವರ ಮಿಲ್‌ನಲ್ಲಿ ಫೈಯರ್, ರಿಪೀಟ್ ಹೆಸರಿನಲ್ಲಿ ಮಾಡ್ತಿರೋದು ನೀವೇ ಹೊರತು ನಾವಲ್ಲ. ಪುಣ್ಯಾತ್ಮ ನಿನ್ನ ಹೆಂಡತಿ ಓದಿರುವುದು ದಂತ ವೈದ್ಯಕೀಯ. ವೈಯಕ್ತಿಕ ವಿಚಾರಕ್ಕೆ ಬರಬೇಡ. ಚುನಾವಣೆಗೆ ನಿನ್ನ ಕೆಲಸ ನೀನು ಮಾಡು, ನನ್ನ ಕೆಲಸ ನಾನು ಮಾಡುತ್ತೇನೆ. ಒಬ್ಬ ಮನುಷ್ಯನನ್ನು ಕೀಳಾಗಿ ನೋಡುವುದು ಸರಿಯಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಬದ್ಧ ವೈರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನರಿಗೆ ಸಲಹೆ ನೀಡಿದರು.ನಗರದ ಬಂಟರ ಭವನದಲ್ಲಿ ಬುಧವಾರ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ತಮ್ಮ ಪತ್ನಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮತಯಾಚಿಸಿ ಮಾತನಾಡಿದ ಅವರು, ನಮ್ಮ ಅಡಕೆ ಉದ್ಯಮದ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ನಾವು ರಣರಣ ದುಡಿದು, ವಿದ್ಯಾಸಂಸ್ಥೆಯನ್ನು ಕಟ್ಟಿದ್ದೇವೆ. ಯಾರದ್ದೋ ಹೊಡೆದುಕೊಂಡಿಲ್ಲ ಎಂದರು.
ಸಿದ್ದವೀರಪ್ಪನವರು ಕಟ್ಟಿದ ಸಕ್ಕರೆ ಕಾರ್ಖಾನೆ ನುಂಗಿದ್ದಾಯ್ತು. ಭದ್ರಾ ಸಕ್ಕರೆ ಕಾರ್ಖಾನೆ ನುಂಗಿದ್ದು ಆಯ್ತಲ್ಲ. ನಾವು ದಾನ, ಧರ್ಮ, ಪುಣ್ಯ ಕಾರ್ಯಕ್ಕೆ ನೆರವು ನೀಡುತ್ತೇವೆ. ಕೊಟ್ಟಿದ್ದಕ್ಕೆಲ್ಲಾ ಬೋರ್ಡ್ ಹಾಕಿಸುವುದಿಲ್ಲ. ಬಲಗೈಯಲ್ಲಿ ಕೊಟ್ಟಿದ್ದು, ಬಲಗೈಗೆ ಗೊತ್ತಾಗದಂತೆ ಇದ್ದೇವೆ. ಒಬ್ಬ ಸಚಿವ ಸ್ಥಾನದಲ್ಲಿರುವ ವ್ಯಕ್ತಿ ಮತ್ತೊಬ್ಬರ ಬಗ್ಗೆ ಅಷ್ಟೊಂದು ವೈಯಕ್ತಿಕವಾಗಿ, ಕೀಳಾಗಿ ಮಾತನಾಡುವುದು ಶೋಭೆಯಲ್ಲ. ಹಿಂದಿನಿಂದಲೂ ನಾನು ಪರ ಜಿಲ್ಲೆಯವರು, ನಾನು ಸತ್ತೇ ಹೋದೆ, ನಾನು ಸೂಳೆಕೆರೆ ನೀರನ್ನು ಚಿತ್ರದುರ್ಗಕ್ಕೆ ಒಯ್ದೆ ಹೀಗೆ ನಾನು ಆರೋಪ ಮಾಡಿಕೊಂಡೆ ಬಂದರೂ ದಾವಣಗೆರೆ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು, ಆಶೀರ್ವದಿಸುತ್ತಲೇ ಬಂದಿದ್ದಾರೆ ಎಂದು ಅವರು ತಿಳಿಸಿದರು.ಜಿಲ್ಲಾ ಮಂತ್ರಿಯಾಗಿ ಎಷ್ಟು ಹಳ್ಳಿಗೆ ಭೇಟಿ ನೀಡಿದ್ದೀರಿ? ಈಗ ಪತ್ನಿಯನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿಕೊಂಡು ಭೈರನಪಾದ ಏತ ನೀರಾವರಿ ಯೋಜನೆ ಮಾಡುವೆ, ಕೆರೆಗಳಿಗೆ ನೀರು ತುಂಬಿಸುವೆ, ಹಳ್ಳಿಗಳಿಗೆ ನೀರು ಕೊಡುವೆ ಅಂತಾ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ದಾವಣಗೆರೆಯಲ್ಲಿ ಟೆಕ್ನಾಲಜಿ ಪಾರ್ಕ್ ಮಾಡಿಸಿದ್ದೇನೆ. 3 ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಐಟಿ ಬಿಟಿ ಕಂಪನಿ, ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಿ ವಿಮಾನ ನಿಲ್ದಾಣಕ್ಕೆ ಜಾಗ ಕೊಟ್ಟರೆ ಅದನ್ನು ಕೇಂದ್ರದಿಂದ ಮಂಜೂರು ಮಾಡಿಸುವುದು ನನ್ನ ಜವಾಬ್ಧಾರಿ. ಕೈಗಾರಿಕೆ ಮಾಡಲು ಭೂ ಸ್ವಾಧೀನಕ್ಕೆ ಮುಂದಾದರೆ ಅಡ್ಡಿ ಪಡಿಸುತ್ತಾರೆ ಎಂದು ಅವರು ಬೇಸರ ಹೊರ ಹಾಕಿದರು.
ಯಾರೇ ಆಗಲಿ ಜನರ ತೀರ್ಪೀಗೆ ತಲೆ ಬಾಗಿ ನಡೆಯಬೇಕು. ಸೂರ್ಯ ಚಂದ್ರರು ಇರುವಷ್ಟೇ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದೂ ಅಷ್ಟೇ ಸತ್ಯ. ದೇಶದ ಭದ್ರತೆ, ಸುರಕ್ಷತೆ, ಸನಾತನ ಧರ್ಮ ರಕ್ಷಣೆ, ಅಭಿವೃದ್ಧಿಗಾಗಿ ಜನತೆ ಮತ್ತೆ ಮೋದಿಗೆ ಆಶೀರ್ವದಿಸುತ್ತಾರೆ. ಕಾಂಗ್ರೆಸ್ ಸರ್ಕಾರ ಬಂದಾಗಲ್ಲೆಲ್ಲಾ ಬರ ಬರುತ್ತದೆ. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಸಮೃದ್ಧ ಮಳೆ, ಬೆಳೆಯಾಗುತ್ತದೆಂದು ರೈತರು, ಜನರೇ ಮಾತನಾಡುತ್ತಾರೆ. ನಾನು ಸದಾ ನಿಮ್ಮ ಸಮಾಜದೊಂದಿಗಿರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ. ನಿಮ್ಮ ಸಹೋದರನಾಗಿ, ಹಿರಿಯನಾಗಿ ಸಮಾಜದರೊಂದಿಗೆ ಇರುತ್ತೇನೆ. ಗಾಯತ್ರಿ ಸಿದ್ದೇಶ್ವರಗೆ ನೀವು ಗೆಲ್ಲಿಸಿ. ದಾವಣಗೆರೆಗೆ ಇಬ್ಬರು ಎಂಪಿ ಆಗುತ್ತಾರೆ. ಮೇ.7ರಂದು ಬೆಳಿಗ್ಗೆ 10.30ರ ಒಳಗಾಗಿ ಎಲ್ಲರೂ ಕುಟುಂಬ ಸಮೇತ ಹೋಗಿ ಮತ ಚಲಾಯಿಸಿ, ನಂತರ ಉಳಿದವರಿಗೂ ಮತ ಚಲಾಯಿಸುವಂತೆ ಮನವೊಲಿಸಿ ಎಂದು ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು.- - - -1ಕೆಡಿವಿಜಿ5:
ದಾವಣಗೆರೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿದರು.- - -