ಉದ್ಘಾಟನೆಗಾಗಿ ಕಾಯುತ್ತಿರುವ ಅಗ್ನಿಶಾಮಕ ಠಾಣೆ

| Published : Feb 06 2025, 12:15 AM IST

ಸಾರಾಂಶ

ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದ ಪರಿಣಾಮ ಅಗ್ನಿ ಅವಘಡಗಳು ನಡೆದ ಸಂದರ್ಭದಲ್ಲಿ ಶಮನ ಕಾರ್ಯ ವಿಳಂಬವಾಗುತ್ತಿತ್ತು.

ಎಸ್.ಎಂ. ಸೈಯದ್ ಗಜೇಂದ್ರಗಡ

ರಾಮಾಪುರ ಗ್ರಾಪಂ ವ್ಯಾಪ್ತಿಯ ಕೊಡಗಾನೂರ ಗ್ರಾಮದ ಬಳಿ ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣವಾಗಿದ್ದು, ಉದ್ಘಾಟನೆಗಾಗಿ ಕಾಯುತ್ತಿದೆ.

ಪಟ್ಟಣ ತಾಲೂಕು ಕೇಂದ್ರವಾದ ಬಳಿಕ ಅಗತ್ಯ ಕಚೇರಿಗಳ ಆರಂಭವಾಗಿಲ್ಲ ಎನ್ನುವ ಕೂಗಿನ ನಡುವೆಯೇ ಅಗ್ನಿಶಾಮಕ ಠಾಣೆ ಸಿದ್ಧವಾಗಿರುವುದು ಜನರಿಗೆ ಸಂತಸ ತಂದಿದೆಯಾದರೂ ಬೇಗ ಉದ್ಘಾಟನೆಯಾಗಲಿ ಎಂದು ಆಶಿಸುತ್ತಿದ್ದಾರೆ.

ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಇಲ್ಲದ ಪರಿಣಾಮ ಅಗ್ನಿ ಅವಘಡಗಳು ನಡೆದ ಸಂದರ್ಭದಲ್ಲಿ ಶಮನ ಕಾರ್ಯ ವಿಳಂಬವಾಗುತ್ತಿತ್ತು. ಕೆಲವು ಬಾರಿ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಸುಟ್ಟು ಬೂದಿಯಾಗುತ್ತಿತ್ತು. ಹೀಗಾಗಿ ಅಗ್ನಿಶಾಮಕ ಠಾಣೆ ಆರಂಭವಾಗಬೇಕು ಎಂಬ ಕೂಗು ತಾಲೂಕಿನಲ್ಲಿ ಕೇಳಿ ಬಂದಿತ್ತು. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಕೆ-ಸೇಪ್-೨ ಯೋಜನೆಯಡಿ ೨೦೨೨-೨೩ನೇ ಸಾಲಿನ ಅಡಿಯಲ್ಲಿ ಅಗ್ನಿಶಾಮಕ ಠಾಣೆ ಮಂಜೂರು ಮಾಡಿತ್ತು. ಮಾಜಿ ಸಚಿವ ಕಳಕಪ್ಪ ಬಂಡಿ ಭೂಮಿಪೂಜೆ ನೆರವೇರಿಸಿದ್ದರು.

ಪಟ್ಟಣ ಸಮೀಪದ ರಾಮಾಪುರ ಗ್ರಾಪಂ ವ್ಯಾಪ್ತಿಯ ಕೊಡಗಾನೂರ ಗ್ರಾಮದ ಬಳಿ ಅಂದಾಜು ₹3 ಕೋಟಿ ವೆಚ್ಚದ ಅಗ್ನಿಶಾಮಕ ಠಾಣೆ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ರಾಜ್ಯ ಪೊಲೀಸ್ ವಸತಿ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮಕ್ಕೆ ಹಣ ಪಾವತಿಸಲಾಯಿತು. ೨೦೨೩ರ ಮೇ ೨೪ರಂದು ಕಾಮಗಾರಿ ಆರಂಭಿಸಿ ೨೦೨೪ರ ಸೆಪ್ಟೆಂಬರ್ ತಿಂಗಳಲ್ಲಿ ಮುಕ್ತಾಯಗೊಳಿಸಲಾಯಿತು. ಬಳಿಕ ಅಗ್ನಿಶಾಮಕ ಇಲಾಖೆಯ ವಶಕ್ಕೆ ಪಡೆಯುವಂತೆ ಸೂಚಿಸಲಾಗಿತ್ತು. ಕರ್ತವ್ಯ ನಿರ್ವಹಿಸಲು ಒಬ್ಬ ಅಗ್ನಿಶಾಮಕ ಠಾಣಾಧಿಕಾರಿ, ಇಬ್ಬರು ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ, ಆರು ಪ್ರಮುಖ ಅಗ್ನಿಶಾಮಕ ಸಿಬ್ಬಂದಿ, ನಾಲ್ವರು ಅಗ್ನಿಶಾಮಕ ಚಾಲಕರು, ಒಬ್ಬರು ಚಾಲಕ ತಂತ್ರಜ್ಞ, 16 ಅಗ್ನಿಶಾಮಕ ಸಿಬ್ಬಂದಿ, ಒಬ್ಬರು ದ್ವಿತೀಯ ದರ್ಜೆ ಸಹಾಯಕ ಹುದ್ದೆ ಸೃಜಿಸಲಾಯಿತು. ಜತೆಗೆ ಎರಡು ಜಲವಾಹನ, ಒಂದು ಕ್ಯೂಆರ್‌ವಿ, ಪೋರ್ಟಬಲ್ ಪಂಪು, ಒಂದು ಮೋಟಾರ ಸೈಕಲ್ (ಅಗ್ನಿ), ಒಂದು ಏರ್ ಕಾಂಪ್ರೆಸರ್‌ ಮಂಜೂರಾತಿ ನೀಡಲು ಕೋರಲಾಯಿತು.

ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಈ ವರೆಗೂ ಈ ಯಾವುದೇ ಸೌಲಭ್ಯ ದೊರೆತಿಲ್ಲ. ತಾಲೂಕಾಡಳಿತ ಅಗ್ನಿಶಾಮಕ ಠಾಣೆಗೆ ಬೇಕಾದ ಅವಶ್ಯಕ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿ, ಮಂಜೂರು ಮಾಡಿಸಬೇಕು. ಕೂಡಲೇ ಅಗ್ನಿಶಾಮಕ ಠಾಣೆ ಉದ್ಘಾಟಿಸಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಗಜೇಂದ್ರಗಡ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡ ಪೂರ್ಣವಾಗಿದ್ದು, ವಾಹನಗಳು ಲಭ್ಯವಾದಲ್ಲಿ, ತಿಂಗಳಾಂತ್ಯದಲ್ಲಿ ಅಗ್ನಿಶಾಮಕ ಠಾಣೆಯು ಉದ್ಘಾಟನೆಯಾಗಬಹುದು ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿ.ಎಸ್. ಟಕ್ಕೇಕರ ತಿಳಿಸಿದ್ದಾರೆ.

ತಾಲೂಕಿನಲ್ಲಿ ಹೊಲ, ಬಣವೆ ಹಾಗೂ ಮನೆ ಸೇರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಹಾಗೂ ಪರಿಸರ ವಿಕೋಪದಿಂದ ಉಂಟಾಗುವ ಅಗ್ನಿ ಅವಘಡಗಳನ್ನು ತಡೆಯಲು ಅಗ್ನಿಶಾಮಕ ದಳದಿಂದ ಮಾತ್ರ ಸಾಧ್ಯ. ಹೀಗಾಗಿ ಅಗ್ನಿಶಾಮಕ ಠಾಣೆಯನ್ನು ಆಡಳಿತ ಲೋಕಾರ್ಪಣೆಗೊಳಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ ಹೇಳಿದರು.