ನಿರ್ಲಕ್ಷ್ಯ ತೋರಿದ ಪೊಲೀಸರನ್ನು ಕೆಲಸದಿಂದ ವಜಾ ಮಾಡಿ: ಶ್ರೀ

| Published : May 17 2024, 12:35 AM IST

ನಿರ್ಲಕ್ಷ್ಯ ತೋರಿದ ಪೊಲೀಸರನ್ನು ಕೆಲಸದಿಂದ ವಜಾ ಮಾಡಿ: ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಯಾರೇ ರಕ್ಷಣೆ ಕೋರಿ‌ ಬಂದರೂ ಅಂಥವರಿಗೆ ಸೂಕ್ತ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಆದರೆ, ಅಂಜಲಿ ಕುಟುಂಬಕ್ಕೆ ರಕ್ಷಣೆ ನೀಡದೇ ಪೊಲೀಸ್ ಇಲಾಖೆ‌‌ ನಿರ್ಲಕ್ಷ್ಯ ಧೋರಣೆ ತೋರಿದೆ.

ಹುಬ್ಬಳ್ಳಿ:

ಅಂಜಲಿ ಹಾಗೂ ಅವರ ಅಜ್ಜಿ ದೂರು ಸಲ್ಲಿಸಲು ಬಂದ ವೇಳೆ ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರನ್ನು ಕೇವಲ ಅಮಾನತು ಮಾಡಿರುವುದು ಸಾಲದು, ಅವರನ್ನು ಕೆಲಸದಿಂದಲೇ ವಜಾ ಮಾಡಿ ಎಂದು ಹಾವೇರಿ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀಗಳು ಒತ್ತಾಯಿಸಿದರು.

ಅವರು ಇಲ್ಲಿನ ವೀರಾಪುರ ಓಣಿಯಲ್ಲಿರುವ ಮೃತ ಅಂಜಲಿ ಅಂಬಿಗೇರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾರೇ ರಕ್ಷಣೆ ಕೋರಿ‌ ಬಂದರೂ ಅಂಥವರಿಗೆ ಸೂಕ್ತ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ. ಆದರೆ, ಅಂಜಲಿ ಕುಟುಂಬಕ್ಕೆ ರಕ್ಷಣೆ ನೀಡದೇ ಪೊಲೀಸ್ ಇಲಾಖೆ‌‌ ನಿರ್ಲಕ್ಷ್ಯ ಧೋರಣೆ ತೋರಿದೆ. ಹಾಗಾಗಿ ಈ ಕೊಲೆಗೆ ಪೊಲೀಸರೆ ನೇರ ಹೊಣೆ ಹೊರಬೇಕು. ಈ ಸಾವಿಗೆ ಸೂಕ್ತ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆ ಘಟನೆ ಮಾಸುವ ಮುನ್ನವೇ ಮತ್ತೊಂದು‌ ಕೊಲೆ ನಡೆದಿದೆ. ನೇಹಾಗೆ ಆದಂತಹ ಅನ್ಯಾಯಕ್ಕಿಂತಲೂ ಹೆಚ್ಚು ಅನ್ಯಾಯ ಅಂಜಲಿ ಕುಟುಂಬಕ್ಕಾಗಿದೆ. ಅಂಜಲಿಗೆ ತಾಯಿ‌ಯಿಲ್ಲ, ತಂದೆ ಇದ್ದೂ ಇಲ್ಲದಂತೆ ಕೂಲಿ ಕೆಲಸ ಮಾಡಿ ಜೀವನ‌ ನಡೆಸುತ್ತಿದ್ದಳು. ಈ ಕುಟುಂಬಕ್ಕೆ ಸರ್ಕಾರ ಆರ್ಥಿಕವಾಗಿ ಸಹಾಯ ಮಾಡಬೇಕು. ಸರ್ಕಾರ ಕೊಲೆ ಹಂತಕನನ್ನು ಹುಡುಕಿ ಎನ್‌ಕೌಂಟರ್‌ ಮಾಡುವ ಮೂಲಕ ಈ‌ ಸಾವಿಗೆ ನ್ಯಾಯ ದೊರಕಿಸುವ ಕೆಲಸಕ್ಕೆ ಮುಂದಾಗಬೇಕು ಎಂದರು.

ಬಸವಣ್ಣನ ನಾಡಿನಲ್ಲಿ ಇಂತಹ ಮಾನಸಿಕತೆ ಇರುವುದು ಖಂಡನೀಯ. ರಾಜಕೀಯ ಹೊರತಾಗಿ ನಮಗೆ ಬೆಂಬಲ ಕೊಡಬೇಕು. ನೇಹಾ ಕೊಲೆಯಾದಾಗ ಸಿಕ್ಕಷ್ಟು ಬೆಂಬಲ ಸಿಕ್ಕಿಲ್ಲ ಎನ್ನುವ ನೋವು ನಮಗಿದೆ. ಆದರೆ, ನೇಹಾ ಘಟನೆಯಾದಾಗ ಸರಿಯಾದ ಶಿಕ್ಷೆ ಕೊಡದೇ ಇರುವುದೇ ಅಂಜಲಿ ಸಾವಿಗೆ ಕಾರಣ. ಸಮಾಜ ಬಾಂಧವರೊಂದಿಗೆ ಸಭೆ ನಡೆಸಿ ಮುಂದೆ ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.